ಓ ರೈತ, ನಿನ್ನ ಶ್ರಮಕ್ಕೆ ತಕ್ಕ ಬೆಲೆ ಸಿಗುವುದು ಯಾವಾಗ? 

ಇದಕ್ಕೆ ಪರಿಹಾರ ಕಂಡುಕೊಳ್ಳುವ ಸೂಕ್ತ ಸಮಯ ಯಾವುದು?

ಜಗತ್ತಿನ ಮುಂದುವರೆದ ದೇಶ ಮತ್ತು ವಿಶ್ವದ ದೊಡ್ಡಣ್ಣ ಎಂದು ಕರೆಯಿಸಿಕೊಳ್ಳುವ ಅಮೇರಿಕ ದೇಶದಲ್ಲಿ ಕೃಷಿಯನ್ನು ಅವಲಂಬಿಸಿದವರು ಹೆಚ್ಚು ಜನರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಎಂದು ಸಮೀಕ್ಷೆಗಳು ಹೇಳುತ್ತಿವೆ. ಇದೇ ರೀತಿ, ಭಾರತ ದೇಶದಲ್ಲಿಯೂ ಕೂಡ ದಿನಕ್ಕೆ ೧೫ ಜನ ರೈತರು ಅತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಎಂದು ಸಮೀಕ್ಷೆಗಳು ಹೇಳುತ್ತಿವೆ. ಆಹಾರವಿಲ್ಲದೆ ಮನುಷ್ಯ ಬದುಕಲು ಸಾಧ್ಯವಿಲ್ಲ, ಆದರೆ ಆಹಾರವನ್ನು ಉತ್ಪಾದಿಸುವ ರೈತ ಆತ್ಮಹತ್ಯೆಗೆ ಶರಣಾದರೆ, ಮುಂದೆ ಉಳಿದ ಕ್ಷೇತ್ರದಲ್ಲಿ ಕೆಲಸ ಮಾಡುವ ಎಲ್ಲ ಜನರಿಗೂ ಒಳ್ಳೆಯ ಭವಿಷ್ಯವಿಲ್ಲ ಎಂಬುದು ತಿಳಿದು ಬರುತ್ತದೆ.

ಅತೀ ಹೆಚ್ಚು ಮಾನವನ ಶ್ರಮ ಬೇಡುವ ಕೃಷಿ ಕ್ಷೇತ್ರವನ್ನು ಲಾಭದಾಯಕವಾಗಿಸುವ ಸೂಕ್ತ ಕಾನೂನುಗಳನ್ನು ತರದೇ ಹೋದರೆ ಮುಂದೆ ಹಲವು ನಾಗರೀಕತೆಗಳೇ ನಾಶವಾಗುವ ಸಾಧ್ಯತೆಯಿದೆ. ಹಿಂದೆ ಅನೇಕ ನಾಗರೀಕತೆಗಳ ನಾಶ ಮೊದಲು ರೈತ ನಾಶವಾಗುವ ಮೂಲಕವೇ ಪ್ರಾರಂಭವಾಗಿವೆ. ಇಂದು ರೈತರ ಮಕ್ಕಳು ರೈತರಾಗಲು ಇಷ್ಟಪಡದೇ ಇರುವುದು ಹಾಗೂ ನಾವು ರೈತರ ಮಕ್ಕಳು ಎಂದು ಹೇಳಿಕೊಳ್ಳಲು ನಾಚಿಕೆ ಪಡುವ ಸ್ಥಿತಿಗೆ ವ್ಯವಸ್ಥೆ ಬಂದು ತಲುಪಿರುವುದಕ್ಕೆ ಮುಖ್ಯ ಕಾರಣ ಕೃಷಿ ಲಾಭದಾಯಕವಾಗುವ ಕಾನೂನುಗಳು ಇರದೇ ಇರುವುದಾಗಿದೆ.

ಇತ್ತೀಚಿನ ದಿನಗಳಲ್ಲಿ ಶೇರ್ ಮಾರ್ಕೆಟಿಂಗ್ ಮತ್ತು ಆನ್ಲೈನ್ ಟ್ರೇಡಿಂಗ್ ಹೆಸರಿನಲ್ಲಿ ಅನೇಕ ಜನ ತಾವು ಗಳಿಸಿದ ಹಣವನ್ನು ಹೂಡಿಕೆ ಮಾಡುತ್ತಿದ್ದಾರೆ. ಇದು ಇಂದು ಗ್ರಾಮಗಳ ಹಂತದಲ್ಲೂ ಆವರಿಸಿ ಅನೇಕರು ತಮ್ಮ ಹಣವನ್ನು ಶೇರ್ ಮಾರ್ಕೆಟಗಳಲ್ಲಿ ಹೂಡಿಕೆ ಮಾಡುತ್ತಿದ್ದಾರೆ.  ಇದಕ್ಕೆ ಮೂಲ ಕಾರಣ, ಕೆಲವೇ ದಿನಗಳಲ್ಲಿ ಕೋಟ್ಯಾಂತರ ರೂಪಾಯಿ ದುಡ್ಡು ಸಂಪಾದಿಸಲು ಮತ್ತು ಕಳೆದುಕೊಳ್ಳಲು ಅವಕಾಶವಿರುವ ಕಾನೂನುಗಳು ಇರುವುದಾಗಿದೆ.  ಇದೊಂದು ಜೂಜಾಟವಾಗಿದೆ. ಈ ಜೂಜಾಟಕ್ಕೆ ಅವಕಾಶವಿರುವ  ಕಾನೂನುಗಳು ಇರುವುದರಿಂದ ಇಂದು ಜನರ ಶ್ರಮ ಸಂಸ್ಕೃತಿ ನಾಶವಾಗಿ ಕೊನೆಗೆ ಯಾರು  ಶ್ರಮ ವಹಿಸಿ ದುಡಿಯಲು ಪ್ರಯತ್ನಿಸುತ್ತಿರುವರೋ ಅವರು ಆತ್ಮಹತ್ಯೆಗೆ ಶರಣಾಗುವ ಪರಿಸ್ಥಿತಿಗೆ ಬಂದು ತಲಪುವಂತೆ ಮಾಡುತ್ತಿದೆ. ಯಾವಾಗ ಶ್ರಮ ಸಂಸ್ಕೃತಿ ನಾಶವಾಗುವುದೋ, ಆಗ ಅತೀ ಹೆಚ್ಚು ನೈಸರ್ಗಿಕ ಸಂಪನ್ಮೂಲಗಳ ವ್ಯರ್ಥ ಬಳಕೆಯಾಗಿ ಪ್ರಕೃತಿ ನಾಶವಾಗಲು ಪ್ರಾರಂಭಿಸುವುದು.

ಮಣ್ಣು ಉಳಿಸಿ ಅಭಿಯಾನದ ಮೂಲಕ ಸರ್ಕಾರಕ್ಕೆ ಸಲ್ಲಿಸಿದ "ಮಣ್ಣು ಪುನಶ್ಚೇತನ ಕಾನೂನು" ರೈತರ ಶ್ರಮಕ್ಕೆ ತಕ್ಕ ಬೆಲೆ ನೀಡುವ ಕಾನೂನಾಗಿದೆ. ಈ ಕಾನೂನಿನ ಅಡಿಯಲ್ಲಿ, ರೈತರ ಜಮೀನುಗಳಲ್ಲಿರುವ ಸಾವಯವ ಇಂಗಾಲದ ಪ್ರಮಾಣಕ್ಕೆ ಅನುಗುಣವಾಗಿ ಸರ್ಕಾರ ಪ್ರೋತ್ಸಾಹ ಧನ ನೀಡುವ ಯೋಜನೆ ತರುವುದರಿಂದ ಎಲ್ಲರೂ ಜಾನುವಾರು ಮತ್ತು ಗಿಡಮರಗಳ ಆಧಾರಿತ ಕೃಷಿ ಪ್ರಾರಂಭಿಸಿ ಮಣ್ಣಿನ ಜೀವಂತಿಕೆ ಹೆಚ್ಚಿಸಬಹುದಾಗಿದೆ. ಇಂದು ಜಾನುವರು ಮತ್ತು ಗಿಡಮರಗಳ ಆಧಾರಿತ ಕೃಷಿ ಮಾಡುವವರಿಗೆ ತಕ್ಕ ಲಾಭ ಇರದೇ ಇರುವ ಕಾರಣ ಜಾನುವಾರು ಸಾಕುವವರ ಮತ್ತು ಗಿಡ ಮರಗಳನ್ನು ಬೆಳೆಸುವವರ ಸಂಖ್ಯೆ ಕಡಿಮೆಯಾಗುತ್ತಿದೆ.

ಜಾನುವಾರು ಮತ್ತು ಮರಗಿಡಗಳ ಆಧಾರಿತ ಕೃಷಿ ಹೆಚ್ಚು ಶ್ರಮವನ್ನು ಬೇಡುತ್ತವೆ. ಅದಕ್ಕೆ ತಕ್ಕ ಬೆಲೆ ಅವರಿಗೆ ದೊರೆಯದೇ ಹೋದರೆ, ಅವರಿಗೆ ಎಲ್ಲಿ ಹೆಚ್ಚು ಹಣ ದೊರೆಯುವುದೋ ಅಲ್ಲಿಗೆ ವಲಸೆ ಹೋಗುವುದು ಸಾಮಾನ್ಯ. ಇದೇ ಕಾರಣಕ್ಕಾಗಿ ಇಂದು ಗ್ರಾಮಗಳಿಂದ ಯುವಕರು ವಲಸೆ ಹೋಗುತ್ತಿದ್ದಾರೆ. ಸಾವಯವ ಇಂಗಾಲದ ಪ್ರಮಾಣಕ್ಕೆ ಅನುಗುಣವಾಗಿ ಹೆಚ್ಚು ಪ್ರೋತ್ಸಾಹ ಧನ ಘೋಷಿಸಿದರೆ ಹಣ ಇರುವವರು ಶೇರ್ ಮಾರ್ಕೆಟಿಂಗ್ ನಲ್ಲಿ ಹಣ ಹೂಡುವ ಬದಲು ಜಮೀನಿನ ಫಲವತ್ತತೆ ಹೆಚ್ಚಿಸಲು ಹಣ ಹೂಡುವರು. ಈ ಮೂಲಕ ಒಟ್ಟು ಪ್ರಕೃತಿಯ ಪೋಷಣೆಗೆ ಅನೇಕ ಜನರನ್ನು ವಿವಿಧ ರೀತಿಯಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗುವುದು.

ಓ ರೈತ, ನಿನ್ನ ಶ್ರಮಕ್ಕೆ ತಕ್ಕ ಬೆಲೆ ಕೇಳುವ ಸೂಕ್ತ ಸಮಯ ಬಂದೊದಗಿದೆ. ಲಾಭದ ಯಾವ ಭರವಸೆಯೂ ಇಲ್ಲದ ಸಂದರ್ಭದಲ್ಲಿಯೂ ಕೂಡ ಸಾವಯವ ಕೃಷಿ ಮಾಡಿ ಭೂಮಿಯ ಜೀವಂತಿಕೆ ಉಳಿಸಲು ಪ್ರಯತ್ನಿಸಿದ ಸಾವಯವ ಕೃಷಿಕರು ಮುಂದಾಳತ್ವ ವಹಿಸಿ ಯೋಜನೆ ಜಾರಿಯಾಗುವಂತೆ ಮಾಡಲೇಬೇಕು. ಹೆಚ್ಚು ಶ್ರಮವಿರುವ ಸಾವಯವ ಕೃಷಿ ಅನುಸರಿಸುತ್ತಾ ಬರುತ್ತಿರುವ ರೈತರಿಗೆ ಈ ಯೋಜನೆಯಿಂದ ಹೆಚ್ಚಿಗೆ ಪ್ರೋತ್ಸಾಹ ಧನ ದೊರೆಯುವುದು. ಇದರ ಮೂಲಕ ಸರಳ ಕೃಷಿ ಪದ್ಧತಿಗಳನ್ನು ಅನುಸರಿಸುತ್ತಿರುವ ರೈತರಿಗೆ ಭೂಮಿಯಲ್ಲಿ ಸಾವಯುವ ಪ್ರಮಾಣ ಹೆಚ್ಚಿಸುವುದರಿಂದ ಹೆಚ್ಚಿಗೆ ಲಾಭವಾಗುವುದು ಎಂಬುದರ ಅರಿವು ಉಂಟಾಗುವುದು.

ಜಾನುವಾರು ಮತ್ತು ಗಿಡಮರಗಳ ಆಧಾರಿತ ಕೃಷಿಯನ್ನು ಪೋಷಿಸುವ ಸೂಕ್ತ ಯೋಜನೆ ತಂದರೆ ಮಾತ್ರ ಮಣ್ಣಿನಲ್ಲಿರುವ ಸಾವಯವ ಇಂಗಾಲದ ಪ್ರಮಾಣ ಹೆಚ್ಚಿಸಿ ಮಣ್ಣು ಮತ್ತು ನೀರಿನ ಸಂರಕ್ಷಣೆ ಮಾಡಿಕೊಳ್ಳಬಹುದು. ಶ್ರಮ ಸಂಸ್ಕೃತಿಯನ್ನು ಪೋಷಿಸಿ ಕೃಷಿ ಸಂಸ್ಕೃತಿ ಪುನಶ್ಚೇತನಗೊಳ್ಳುವ ಸೂಕ್ತ ಯೋಜನೆ ತರುವ ಕುರಿತು ಆಳವಾಗಿ ಚರ್ಚೆ ಮಾಡುವ ಸೂಕ್ತ ಸಮಯ ಬಂದೊದಗಿದೆ. ಈ ನಿಟ್ಟಿನಲ್ಲಿ ೨೦೨೩ ರ ಕರ್ನಾಟಕ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಣದಲ್ಲಿರುವ ಎಲ್ಲ ಅಭ್ಯರ್ಥಿಗಳಿಗೆ ಪಕ್ಷಾತೀತವಾಗಿ "ಮಣ್ಣು ಪುನಶ್ಚೇತನ ಕಾನೂನಿನ" ಮೂಲಕ ಕೃಷಿ ಲಾಭದಾಯಕವಾಗುವ ಯೋಜನೆ ಜಾರಿಗೆ ತರಲು ಮನವಿ ಪತ್ರ ಸಲ್ಲಿಸುವ "ನಡೆ ನಮನ" ಎಂಬ 'ಪತ್ರ ಚಳುವಳಿ' ಪ್ರಾರಂಭಿಸಲಾಯಿತು. ವಿಜಯಪುರ ಜಿಲ್ಲೆಯ ಹಿರಿಯ ಸಾವಯವ ಕೃಷಿಕರ ನೇತೃತ್ವದಲ್ಲಿ ಈ ನಿಟ್ಟಿನ ಪ್ರಯತ್ನ ಪ್ರಾರಂಭಿಸಲಾಯಿತು. ಕರ್ನಾಟP ರಾಜ್ಯದ ೨೧ ಜಿಲ್ಲೆಗಳಲ್ಲಿ ಈ ಚಟುವಟಿಕೆಯನ್ನು ಸ್ವತಃ ರೈತರ ನೇತೃತ್ವದಲ್ಲಿ ಯಶಸ್ವಿಯಾಗಿ ಅನುಷ್ಠಾನ ಮಾಡಲಾಯಿತು. ಸದರಿ ಮನವಿ ಪತ್ರದ ಮೂಲಕ  ಸಾವಯವ ಇಂಗಾಲದ ಪ್ರಮಾಣಕ್ಕೆ ಅನುಗುಣವಾಗಿ ಪ್ರತಿ ಎಕರೆಗೆ  ಪ್ರೋತ್ಸಾಹ ಧನ ನೀಡುವ ಬೇಡಿಕೆ ಸಲ್ಲಿಸಲಾಯಿತು. 

ಅನೇಕ ವರ್ಷಗಳಿಂದ ಸಾವಯವ ಕೃಷಿ ಅನುಸರಿಸುತ್ತಾ ಬಂದ ಸಾವಯವ ಕೃಷಿಕರೂ ಕೂಡ ಮುಂದೆ ಸುಸ್ಥಿರವಾಗಿ ಬದುಕಲು ಸಾಧ್ಯವಿಲ್ಲ. ಏಕೆಂದರೆ, ಇತರ ಎಲ್ಲರ ಜಮೀನಿನಲ್ಲಿ ಸಾವಯವ ಇಂಗಾಲದ ಪ್ರಮಾಣ ಕಡಿಮೆಯಾದಂತೆ ಭೂಮಿ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಕಳೆದುಕೊಂಡು ಬಾವಿ ಮತ್ತು ಬೋರವೆಲ್ ನೀರು ಅವಲಂಬಿತರು ನೀರಿನ ಕೊರತೆ ಅನುಭವಿಸುವರು. ಇದರ ಜೊತೆಗೆ ಪ್ರಕೃತಿ ವಿಕೋಪಗಳು ಹೆಚ್ಚಾಗಿ ವಿವಿಧ ರೀತಿಯಲ್ಲಿ ಹಾನಿಗೊಳಗಾಗುವ ಸಂದರ್ಭ ಬರುವುದು. ಹಾಗಾಗಿ, ಇಂದು ದನಕರುಗಳನ್ನು ಸಕಾಣಿಕೆ ಮಾಡುವವರು, ಗಿಡಮರಗಳ ಆಧಾರಿತ ಕೃಷಿ ಮಾಡುವವರು ಹಾಗೂ ಸಾವಯವ ಕೃಷಿಕರು ಮುಂದಾಳತ್ವ ವಹಿಸಿ ಈ ಯೊಜನೆ ಜಾರಿಯಾಗುವಂತೆ ಮಾಡಿ ತಮ್ಮನ್ನು ರಕ್ಷಿಸಿಕೊಂಡು ಇತರ ರೈತರನ್ನೂ ರಕ್ಷಿಸುವ ಜವಾಬ್ದಾರಿಯಿದೆ.

ಮಣ್ಣು ಪುನಶ್ಚೇತನ ಯೋಜನೆ ಜಾರಿಗೆ ತರುವುದರಿಂದ ರೈತರಿಗೆ ಮತ್ತು ರೈತರನ್ನು ಅವಲಂಬಿಸಿದವರಿಗೆ ಆಗುವ ಲಾಭಗಳು.

ಹೆಚ್ಚು ಶ್ರಮವಿರುವ ಸಾವಯವ ಕೃಷಿಕರಿಗೆ ಮತ್ತು ಸರಳ ಕೃಷಿ ಅನುಸರಿಸಿದವರಿಗೆ 3 ಮಾದರಿಯ ಯೋಜನೆಯಿಂದ ದೊರೆಯಬಹುದಾದ  ಪ್ರೋತ್ಸಾಹ ಧನದ ಅಂದಾಜು ಮೊತ್ತ ಕೋಷ್ಟಕದಲ್ಲಿ ನೀಡಲಾಗಿದೆ 

ಬಸವರಾಜ ಬಿರಾದಾರ

ಮಣ್ಣು ಉಳಿಸಿ ಅಭಿಯಾನದ ಸ್ವಯಂ ಸೇವಕರು 

ಹಾಗೂ ದೂರದರ್ಶಿತ್ವ ನಾಯಕತ್ವದ ಮಾರ್ಗದರ್ಶಕರು(Mentor for Visionary Leadership)