ಕಂಬಿ ಮಲ್ಲಯ್ಯನಿಂದ

 ನಂದಿಗಳ ರಕ್ಷಣೆಜೋಡೆತ್ತಿನ ರೈತರ ಹಿತಚಿಂತನೆ


   ಜನಪ್ರೀಯ ಯೋಜನೆಗಳ ಬದಲು ಬಸವ ಪ್ರೀಯ ಯೋಜನೆಗಳನ್ನು ಜಾರಿಗೆ ತರುವ ನಾಯಕರು ಎಲ್ಲಿದ್ದಾರೆ?


ಎತ್ತು ಆಧಾರಿತ ಕೃಷಿಯು ಜಗತ್ತಿನಲ್ಲಿ ಅತೀ ಉತ್ತಮವಾದ ಸುಸ್ಥಿರ ಕೃಷಿಯಾಗಿದೆ. ಭಾರತದಲ್ಲಿ ಬಹು ಸಂಖ್ಯೆ ರೈತರು ಎತ್ತು ಆಧಾರಿತ ಕೃಷಿ ಅನುಸರಿಸುತ್ತಾ ಬಂದ ಕಾರಣ ಅತೀ ಪುರಾತನವಾದ ಕೃಷಿ ಸಂಸ್ಕೃತಿ ಹೊಂದಿದ ದೇಶಗಳಲ್ಲಿ  ಮೊದಲ ಸ್ಥಾನದಲ್ಲಿದೆ. ಇದೇ ಕಾರಣಕ್ಕೆ, ‌ಭಾರತ ದೇಶದ ಹಲವು ಆಚರಣೆಗಳು ಎತ್ತು ಆಧಾರಿತ ಕೃಷಿ ಕೇಂದ್ರಿತವಾಗಿವೆ.  


ಹಿಂದೆ ರಾಜರ ಆಡಳಿತವಿದ್ದಾಗ, ರಾಜರ ಸಿರಿ ಸಂಪತ್ತನ್ನು ರಾಜ್ಯದಲ್ಲಿರುವ ಎತ್ತುಗಳು ಹಾಗೂ ಗೋವುಗಳ ಸಂಖ್ಯೆಯ ಮೇಲೆ ಅಳೆಯಲಾಗುತ್ತಿತ್ತು ಎನ್ನುವುದನ್ನು ಕೇಳಿದ್ದೇವೆ. ಎತ್ತುಗಳು ಹಾಗೂ ಗೋವುಗಳ ಸಂಖ್ಯೆ ಹೆಚ್ಚಿಗೆ ಇದ್ದರೆ, ಜನರು ಸ್ವತಂತ್ರವಾಗಿ ಜೀವನ ನಿರ್ಮಿಸಿಕೊಂಡು ರಾಜ್ಯದ ಆಡಳಿತಕ್ಕೆ ತೆರಿಗೆ ಕಟ್ಟಬಲ್ಲರು ಎಂಬುದಾಗಿತ್ತು. ಹನ್ನೆರಡನೇ ಶತಮಾನದಲ್ಲಿ ಜಗಜ್ಯೋತಿ ಬಸವಣ್ಣನವರೂ ಕೂಡ ಜೋಡೆತ್ತಿನ ಕೃಷಿಯನ್ನು ಮೂಲ ಆಧಾರವಾಗಿ ಇಟ್ಟುಕೊಂಡು ಆಧ್ಯಾತ್ಮಿಕ ಕ್ರಾಂತಿಗೆ ಮುನ್ನುಡಿ ಬರೆದರು.


ಇಂದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕೀಯ ನಾಯಕರು ಕೇವಲ ಅಧಿಕಾರದ ಆಸೆಗಾಗಿ ಜಾರಿಗೆ ತರುತ್ತಿರುವ ಜನಪ್ರೀಯ ಯೋಜನೆಗಳು ಗ್ರಾಮೀಣ ಕೃಷಿ ಸಂಸ್ಕೃತಿಗೆ ಕೊಡಲೆ ಪೆಟ್ಟು ನೀಡುತ್ತಿವೆ.‌ ಯಾವಾಗ ಸಮಾಜದಲ್ಲಿ ಮೂಲಭೂತ ಅವಶ್ಯಕತೆಗಳು ಉಚಿತವಾಗಿ ದೊರೆಯುವವೋ ಆಗ ಹೆಚ್ಚು ಶ್ರಮ ಬೇಡುವ  ಜೊಡೆತ್ತಿನ‌ ಕೃಷಿ ನಾಶವಾಗುವುದು. ಈ ನಿಟ್ಟಿನಲ್ಲಿ ಜನಪ್ರೀಯ ಯೋಜನೆಗಳು ಬಸವ ತತ್ವದ ವಿರುದ್ಧವಾದ ಯೋಜನೆಗಳಾಗಿವೆ. ಬಸವವಣ್ಣನವರ ಕಾಯಕವೇ ಕೈಲಾಸ ತತ್ವವನ್ನು ನಾಶ ಮಾಡುವ ಯೋಜನೆಗಳಾಗಿವೆ. ಬಯಲು ಸೀಮೆಯ‌ ಜೀವನಾಡಿಗಳಾದ ಎತ್ತುಗಳು ಕಾಸಾಯಿಖಾನೆಯ ಪಾಲಾಗಿ ಬಂಜರು ಭೂಮಿ ಹೆಚ್ಚಿಗೆ ಆಗುತ್ತಿರುವುದಕ್ಕೆ ಮೂಲ‌ ಕಾರಣ ಜನಪ್ರೀಯ ಯೋಜನೆಗಳಾಗಿವೆ.


ಬಸವ ತತ್ವವು ಶ್ರಮ ಸಂಸ್ಕೃತಿಯ ಪ್ರತೀಕ‌. ಇದೇ ಕಾರಣಕ್ಕೆ ಜೋಡೆತ್ತಿನ ಕೃಷಿಯು ಬಸವ ತತ್ವದ ಮೂಲ ಕೇಂದ್ರ ಬಿಂದುವಾಗಿದೆ. ಗ್ರಾಮದಲ್ಲಿ ಜೊಡೆತ್ತಿನ ಕೃಷಿ ಉಳಿದರೆ ಮಾತ್ರ ಅದಕ್ಕೆ ಅವಲಂಬಿತ ಉದ್ಯೋಗಗಳಾದ ಬಡಿಗತನ, ಕಂಬಾರಿಕೆ, ಕುಂಬಾರಿಕೆ, ಚಮ್ಮಾರಿಕೆ, ನೂಲುವುದು, ಹೀಗೆ ಅನೇಕ ಉದ್ಯೋಗಗಳು ಉಳಿಯುವವು. ಆದರೆ, ಇಂದು ಜೋಡೆತ್ತಿನ ಕೃಷಿ ಅಳಿವಿನ ಅಂಚಿಗೆ ಬಂದು ನಿಂತಿರುವುದರಿಂದ ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿದೆ. ಜೋಡೆತ್ತಿನ ಕೃಷಿಗೆ ಆದ್ಯತೆ ನೀಡದೇ ಭಾರತ ದೇಶದಲ್ಲಿ ಬಹು ಜನರ ನಿರುದ್ಯೋಗ ಸಮಸ್ಯೆಯನ್ನು ಖಂಡಿತ ನಿವಾರಿಸಲು ಸಾಧ್ಯವಿಲ್ಲ. ಜನಪ್ರೀಯ ಯೋಜನೆಗಳು ಮುಂದೆ ಸಮಾಜದಲ್ಲಿ ಹಲವು ಸಮಸ್ಯೆಗಳನ್ನು ಸೃಷ್ಟಿ‌ ಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ.


ಇಂದಿನ ಯಾವುದೇ ಪಕ್ಷದ ಲಿಂಗಾಯತ ನಾಯಕರಾದರೂ ಸರಿ, ಜೋಡೆತ್ತಿನ ಕೃಷಿಗೆ ಮಹತ್ವ ನೀಡದೇ ತಾವು ಲಿಂಗಾಯತ ನಾಯಕರು ಎಂದು ಹೇಳಿಕೊಳ್ಳುವುದರಲ್ಲಿ ಯಾವುದೇ ಅರ್ಥವಿಲ್ಲ. ಬಸವ ತತ್ವದ ಮೂಲ‌‌ ಬೇರಾದ ಜೋಡೆತ್ತಿನ ಕೃಷಿಯನ್ನು ಉಳಿಸದೇ ಲಿಂಗಾಯತ ನಾಯಕರಾಗಿ ಬಹುದಿನಗಳ ವರೆಗೆ ಉಳಿಯಲು ಸಾಧ್ಯವೇ ಇಲ್ಲ. ಅವರು ಉಳಿಯಬೇಕೆಂದರೂ ಕೂಡ ಪ್ರಕೃತಿ ಅವರನ್ನು ನಾಯಕರನ್ನಾಗಿ ಉಳಿಯಲು ಬಿಡುವುದಿಲ್ಲ.‌ ಜನಪ್ರೀಯ ಯೋಜನೆಗಳು ಹೆಚ್ಚಾದಂತೆ ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಾ ಸಾಗುವುದು. ನಿರುದ್ಯೋಗ ಸಮಸ್ಯೆ ಹೆಚ್ಚಾದಂತೆ ರಾಜಕೀಯ ನಾಯಕರು ತಮ್ಮ ಸಮಾಜದ ಮೇಲೆ ಹಿಡಿತ ಸಾಧಿಸಲು ಸಾಧ್ಯವಾಗುವುದಿಲ್ಲ. ಕೊನೆಗೆ ತಾವು ಲಿಂಗಾಯತ ನಾಯಕರು ಎಂದು ಹೇಳಿಕೊಳ್ಳುವ ಅರ್ಹತೆಯನ್ನೇ ಕಳೆದುಕೊಳ್ಳುವರು. 


ಜೇಡರವು ತನ್ನ ಸುತ್ತಲು ಬಲೆ ಹೆಣೆದುಕೊಂಡು ತಾನೇ ಬಂಧಿಯಾಗುವಂತೆ, ಇಂದಿನ ಅನೇಕ ಲಿಂಗಾಯತ ನಾಯಕರು ಜನಪ್ರೀಯ ಯೋಜನೆಗಳ ಪರವಾಗಿ ನಿಂತು ಅವರ ರಾಜಕೀಯ ಭವಿಷ್ಯವನ್ನು ತಾವೇ ಸರ್ವನಾಶ ಮಾಡಿಕೊಳ್ಳುವ ಹಾದಿ ಹಿಡಿದಿದ್ದಾರೆ. ಇದೇ ರೀತಿ ಕೆಲವು ಲಿಂಗಾಯತ ನಾಯಕರು ಜನಪ್ರೀಯ ಯೋಜನೆಗಳನ್ನು ವಿರೋಧಿಸಲೂ ಕೂಡ ಆಗದೇ ತಮ್ಮ ಜವಾಬ್ದಾರಿಯಿಂದ ನುನುಚಿಕೊಳ್ಳುತ್ತಿದ್ದಾರೆ.


ಯಾರು ಬಸವಣ್ಣನವರ ನಿಜವಾದ ಅನುಯಾಯಿಗಳೋ, ಅವರು ಇಂದಿನಿಂದಲೇ ತಮ್ಮ ಗ್ರಾಮಗಳಲ್ಲಿ ಜೊಡೆತ್ತಿನ ಕೃಷಿಕರನ್ನು ಗುರುತಿಸಿ ಗೌರವಿಸುವ ಕೆಲಸ ಪ್ರಾರಂಭಿಸಬೇಕು. ಇದರೊಂದಿಗೆ ಜೊಡೆತ್ತಿನ ರೈತರನ್ನು ಸಂಘಟಿಸಿ ಅವರಿಗೆ ವಿವಿಧ ಸಂಘ-ಸಂಸ್ಥೆಗಳ ಮೂಲಕ ಪ್ರೋತ್ಸಾಹ ದೊರೆಯುವಂತೆ ಮಾಡಬೇಕು. ಮುಂದುವರೆದು, ಸರ್ಕಾರದಿಂದ ಜೋಡೆತ್ತಿನ ಕೃಷಿಕರಿಗೆ ಪ್ರೋತ್ಸಾಹ ಧನ ನೀಡುವ ಯೋಜನೆ ಜಾರಿಗಾಗಿ ಸ್ಥಳೀಯ ನಾಯಕರಿಗೆ ಮನವಿ ಪತ್ರ ಸಲ್ಲಿಸುವ ಕೆಲಸ‌ ಮಾಡಬೇಕು.‌ ಈ ರೀತಿಯ ಕೆಲಸವನ್ನು ಬಸವಣ್ಣನವರ ಅನುಯಾಯಿಗಳು ಮಾಡಿದ್ದೇ ಆದರೆ, ಮುಂದೆ ಅವರನ್ನು ಸಮಾಜವೇ ಒಳ್ಳೆಯ ‌ನಾಯಕರನ್ನಾಗಿ ಗುರುತಿಸುವ ಸಂದರ್ಭ ಬಂದೊದಗುವುದು.‌ ಆಧ್ಯಾತ್ಮಿಕ ದೃಷ್ಟಿಯಿಂದ, ಬಸವಣ್ಣನವರು ನಮ್ಮನ್ನು ಮೆಚ್ಚಿ ಕೃಪೆ ತೋರಿ ಒಳ್ಳೆಯ ದಾರಿ ತೋರುವ ಕಾರ್ಯವಾಗಿದೆ. ಇಂದು ಬಸವ ತತ್ವದ ಮೂಲ ಬೇರಾದ ಜೋಡೆತ್ತಿನ‌ ಕೃಷಿಯ ಪುನಶ್ಚೇತನಕ್ಕಾಗಿ ಪ್ರಯತ್ನಿಸುವುದೇ ನಿಜವಾದ ಬಸವ ಪ್ರೀಯ ಕೆಲಸವಾಗಿದೆ.‌..ಯೋಚಿಸಿ!

...........................................ಬಸವರಾಜ ಬಿರಾದಾರ

ಸಂಸ್ಥಾಪಕರು, 

ಅಭೀಃ ಫೌಂಡೇಶನ್ (ಋಷಿ- ಕೃಷಿ ಸಂಸ್ಕೃತಿ ಪುನಶ್ಚೇತನ)

9449303880

missionsavesoil.com


ಜೋಡೆತ್ತಿನ ರೈತರ ಹಿತಚಿಂತನೆ


   ಪ್ರಕೃತಿಯ ವಿನಾಶದಿಂದ ಹಣವು ಹೆಣಕ್ಕೆ ಸಮನಾಗುವ ಮುಂಚೆ ಹೂಡಿಕೆ ಮಾಡಬಹುದಾದ ಸೂಕ್ತ ಕ್ಷೇತ್ರ ಯಾವುದು?


ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗುತ್ತಿರುವ ಬಿಸಿಲಿನ ತಾಪ,  ನೀರಿನ ಕೊರತೆ, ಗುಣಮಟ್ಟದ ಆಹಾರ ಕೊರತೆ‌, ದೈಹಿಕ ಹಾಗೂ ಮಾನಸಿಕ‌ ಸಮಸ್ಯೆಗಳನ್ನು ಗಮನಿಸಿದರೆ, ಮುಂದಿನ ದಿನಗಳಲ್ಲಿ‌ ಹಣವು ಮೌಲ್ಯ‌ ಕಳೆದುಕೊಂಡು ಪ್ರಕೃತಿಯ ಮೌಲ್ಯ ಹೆಚ್ಚಾಗುತ್ತಾ ಸಾಗುವುದರಲ್ಲಿ ಸಂಶಯವಿಲ್ಲ.


ನಮ್ಮ ಸಾವಿಗಿಂತ ಮೊದಲು ನಮ್ಮ ದೇಹಕ್ಕೆ ಬೆಲೆಯಿದೆ. ಸತ್ತರೆ ದೇಹವನ್ನು ಆದಷ್ಟು ಬೇಗನೆ ಮಣ್ಣಿಗೆ ಸೇರಿಸುವ ವ್ಯವಸ್ಥೆ ಮಾಡುವರು. ಸತ್ತ ದೇಹವನ್ನು ನೋಡಿ ಹಲವರು ಅಳಬಹುದು, ಆದರೆ ಅದೇ ದೇಹವನ್ನು ಇಟ್ಟುಕೊಳ್ಳಲು ಯಾರೂ ಇಚ್ಚಿಸುವುದಿಲ್ಲ. ಏಕೆಂದರೆ, ಅದು ಜೀವಂತಿಕೆ ಕಳೆದುಕೊಂಡು ಪ್ರತಿ ಕ್ಷಣ ಮಣ್ಣಿಗೆ ಹತ್ತಿರವಾಗುತ್ತಿರುತ್ತದೆ. ಇದೇ ರೀತಿ, ಹಣವೂ ಕೂಡ ಒಂದು ದಿನ ತನ್ನ ಮೌಲ್ಯವನ್ನು ಕಳೆದುಕೊಳ್ಳುವುದು. ಹಣವು ಇದ್ದರೂ ಸಹ ಉಪಯೋಗಕ್ಕೆ ಬಾರದ ಸ್ಥಿತಿ ತಲೆದೋರುವುದು. ಇಂತಹ ದಿನಗಳು ಹತ್ತಿರವಾಗುತ್ತಿರುವುದು ಹಲವು ವೈಜ್ಞಾನಿಕ ಪುರಾವೆಗಳಿಂದ‌ ತಿಳಿಯುತ್ತಿದೆ.


ಹೇಗೆ ನಾವು ದೇಹ ಇರುವಾಗಲೇ ಸಾಧ್ಯವಾದಷ್ಟು ಒಳ್ಳೆಯ ಕೆಲಸವನ್ನು ಮಾಡಬಹುದೋ, ಅದೇ ರೀತಿ ಹಣ ಇರುವಾಗ‌ ಅದನ್ನು ಯೋಗ್ಯ ಕೆಲಸಕ್ಕೆ ಬಳಸಬೇಕಾಗುವುದು. ಅಂದಾಗ ಮಾತ್ರ ನಮ್ಮಲ್ಲಿರುವ ಹಣವು ಮೌಲ್ಯ ಕಳೆದುಕೊಂಡರೂ ಸಹ ನಮ್ಮ‌ ಮೌಲ್ಯ ಕಡಿಮೆಯಾಗುವುದಿಲ್ಲ.‌


ಕಳೆದ ಕೆಲವು ದಶಕಗಳಿಂದ ರಾಜಕೀಯ ನಾಯಕರು,‌ ವ್ಯಾಪಾರಿಗಳು, ಸರ್ಕಾರಿ ನೌಕರರು ಹಾಗೂ ಖಾಸಗಿ ನೌಕರರಿಗೆ ಪುರಕವಾದ ಶಿಕ್ಷಣ, ಯೊಜನೆಗಳು ಹಾಗೂ ಕಾನೂನುಗಳನ್ನು ಜಾರಿಗೆ ತಂದ ಕಾರಣ, ಕೃಷಿ ಕ್ಷೇತ್ರ ಸುಸ್ಥಿರತೆಯನ್ನು ಕಳೆದುಕೊಂಡು ಫಲವತ್ತಾದ ಭೂಮಿ ಮರಭೂಮಿಯಾಗಿ ಪರಿವರ್ತಿತವಾಗುತ್ತಿದೆ. ವಿಶ್ವ ಸಂಸ್ಥೆ ಹಾಗೂ ಜವಾಬ್ದಾರಿಯುತ ವಿಜ್ಞಾನಿಗಳು ನೀಡುತ್ತಿರುವ ಅಂಕಿ-ಅಂಶಗಳ ಪ್ರಕಾರ ದಿನ ಕಳೆದಂತೆ ಪ್ರಕೃತಿ ವಿಕೋಪಗಳು ಹೆಚ್ಚಾಗುವ ಸಾಧ್ಯತೆಯಿದೆ. ಇದರಿಂದ, ನೀರು ಹಾಗೂ ಆಹಾರ ಕೊರತೆ ಹಾಚ್ಚಾಗುವುದರ ಜೊತೆಗೆ ಭೂಮಿಯ ಮೇಲಿನ ತಾಪಮಾನ ಹೆಚ್ಚಾಗುತ್ತಾ ಸಾಗುವುದು.‌ ಇದರ ಪರಿಣಾಮದಿಂದ, ಹಣವು ತನ್ನ ಮೌಲ್ಯವನ್ನು ಕಳೆದುಕೊಳ್ಳಲು ಪ್ರಾರಂಭಿಸುವುದು. ನಾವು ಗಮನಿಸಿದ ಹಾಗೆ, ಯಾವ ದೇಶದಲ್ಲಿ ಅನ್ನ ಹಾಗೂ ನೀರಿನ‌ ಕೊರತೆ ಹೆಚ್ಚಾಗುವುದೋ, ಆ ದೇಶದಲ್ಲಿ ಹಣವು ಮೌಲ್ಯವನ್ನು  ಕಳೆದುಕೊಂಡಿದೆ. 


ಪ್ರಕೃತಿಯು ಮನುಷ್ಯನ ಜೀವನಕ್ಕೆ ವಿರುದ್ಧವಾದಾಗ, ಚಲಿಸದ ವಸ್ತುಗಳಾದ ಪ್ಲಾಟ್ ಗಳು ಹಾಗೂ ಜಮೀನುಗಳ ಬೆಲೆ ಕುಸಿಯಲು ಪ್ರಾರಂಭಿಸುವುದು. ಸರ್ಕಾರಿ ಹಾಗೂ‌ ಖಾಸಗಿ ನೌಕರರ ವೇತನ ಕಡಿಮೆಯಾಗಿ ಎಂದಿನಂತೆ ಜೀವನ‌ ನಡೆಸುವುದು ಕಷ್ಟವಾಗುವುದು. 


ಮುಂದಿನ ದಿನಗಳಲ್ಲಿ ಯಾವ ಕ್ಷೇತ್ರ ಹೆಚ್ಚು ಮೌಲ್ಯಯುತವಾಗುವುದೋ ಅದನ್ನು ಅರಿತು ಹೂಡಿಕೆ ಮಾಡುವುದು ಬಹಳ ಸೂಕ್ತ.‌ ಯಾವುದರ ನಾಶದಿಂದ ಪ್ರಕೃತಿ ನಾಶವಾಗುತ್ತಿರುವುದೋ ಅದರ ಮೇಲೆ ಹೂಡಿಕೆ ಮಾಡುವುದರಿಂದ ನಮ್ಮ ಮೌಲ್ಯವನ್ನು ಹೆಚ್ಚಿಸುತ್ತಾ ಸಾಗಬಹುದು. ಪ್ರಕೃತಿಯ ನಾಶಕ್ಕೆ ಮೂಲ‌ ಕಾರಣ ಎತ್ತು ಆಧಾರಿತ ಕೃಷಿ ಹಾಗೂ ಗಿಡಮರಗಳ ನಾಶವಾಗಿದೆ. ಇವೆರಡು ಕ್ಷೇತ್ರದ ಜೀವಂತಿಕೆ ಹೆಚ್ಚಿಸುವುದಕ್ಕಾಗಿ ಇಂದು ನಮ್ಮ ಹಣವನ್ನು ವಿನಿಯೋಗಿಸಿದರೆ, ನಮ್ಮ ಹಲವು ತಲೆಮಾರುಗಳವರೆಗೆ ನಮ್ಮ ಮನೆತನದ ಮೌಲ್ಯ ಹೆಚ್ಚಾಗುತ್ತಾ ಸಾಗುವುದರಲ್ಲಿ ಸಂಶಯವಿಲ್ಲ.‌ 


ನಾವು ಯಾವ ಕೆಲಸಕ್ಕಾಗಿ ನಮ್ಮ ಹಣವನ್ನು ಹೂಡಿಕೆ‌ ಮಾಡುತ್ತೇವೆಯೋ ಅದರ ಬಗ್ಗೆ ಜ್ಞಾನವನ್ನೂ ಕೂಡ ಸಂಪಾದಿಸುತ್ತೇವೆ. ಪ್ರಕೃತಿಯ ಕುರಿತು ಸಂಪಾದಿಸುವ ಜ್ಞಾನವು ಜೀವನದ ಅತ್ಯಂತ ದೊಡ್ಡ ಸಂಪತ್ತಾಗಿದೆ. ಭೂಮಿಯ ಮೇಲೆ ಚಲಿಸುತ್ತಾ ಪ್ರಕೃತಿಯ ಶ್ರೀಮಂತಿಕೆಯನ್ನು ಹೆಚ್ಚಿಸುವ ಪ್ರಾಣಿಗಳಲ್ಲಿ ಎತ್ತುಗಳು ಮೊದಲ ಸ್ಥಾನದಲ್ಲಿವೆ. ಪ್ರಕೃತಿ ಮಾತೆಯ ಜೀವಂತಿಕೆ ಉಳಿಸಿ ಬೆಳೆಸುವ ಜೋಡೆತ್ತಿನ ಕೃಷಿಕರ ಸಂಘದಲ್ಲಿ ನಾವಿರುವುದರಿಂದ  ನಮ್ಮ ಮೌಲ್ಯ ಹೆಚ್ಚಾಗುತ್ತಾ ಸಾಗುವುದು.‌ ಆದರೆ, ನಾವು ಪ್ರಕೃತಿಗೆ ಪೂರಕವಾದ ಶಿಕ್ಷಣ ಪಡೆಯದಿರುವ ಕಾರಣ, ಅಜ್ಞಾನದಿಂದ ಜೋಡೆತ್ತಿನ ಕೃಷಿಯ ಮಹತ್ವ ಅರಿಯದೇ ನಡೆಯುತ್ತಿದ್ದೇವೆ. ಅದಕ್ಕಾಗಿ, ಇಂದು ಹಣವಂತರು ತಮ್ಮ ಹಣವನ್ನು ಹೂಡಿಕೆ ಮಾಡಬಹುದಾದ ಮೌಲ್ಯಯುತ ಕ್ಷೇತ್ರವೇ ಜೋಡೆತ್ತಿನ ಕೃಷಿಯಾಗಿದೆ.‌


ಜೋಡೆತ್ತಿನ‌ ಕೃಷಿಕರಿಗೆ ಸೂಕ್ತ ಪ್ರೋತ್ಸಾಹ ಸಿಗದ ಕಾರಣ ರೈತರು ಅನಿವಾರ್ಯವಾಗಿ ಎತ್ತುಗಳನ್ನು ಮಾರಾಟ ಮಾಡಿದಾಗ, ಅದರಲ್ಲಿ ಬಹು ಸಂಖ್ಯೆ ಎತ್ತುಗಳು ಕಾಸಾಯಿಖಾನೆಯ ಪಾಲಾಗುತ್ತಿವೆ. ಜೋಡೆತ್ತಿನ ಕೃಷಿಯನ್ನು ನಾವು ಸ್ವತಃ ಮಾಡಲು ಆಗದಿದ್ದರೆ, ಜೋಡೆತ್ತಿನ ಕೃಷಿ ಮಾಡುತ್ತಿರುವ ರೈತರನ್ನು ಉಳಿಸಿ‌ ಬೆಳೆಸುವ ಕಾರ್ಯದಲ್ಲಿ ತೊಡಗಬಹುದಾಗಿದೆ. ಹಣವಂತರು ತಮ್ಮ ಗ್ರಾಮದ ಜೊಡೆತ್ತು ಸಾಕಾಣಿಕೆದಾರರನ್ನು ಗುರುತಿಸಿ ಸನ್ಮಾನ ಮಾಡಬಹುದು. ಜೋಡೆತ್ತಿನ ರೈತರಿಗೆ ಸಾಧ್ಯವಾದಷ್ಟು ಪ್ರೋತ್ಸಾಹ ಧನ ನೀಡಬಹುದು. ಕೆಲವು ಜೋಡೆತ್ತಿನ ಕೃಷಿಕರನ್ನು ಅಥವಾ ಗ್ರಾಮವನ್ನು ದತ್ತು ಪಡೆದು ಜೋಡೆತ್ತಿನ ಕೃಷಿ ಉಳಿಸಿ ಬೆಳೆಸಬಹುದು.‌ ಇಂದು ಹಣವಂತರು ಮೂಕ‌ ಬಸವಣ್ಣನ ರಕ್ಷಣೆಗಾಗಿ ತಮ್ಮ‌ ಹಣ ಹೂಡಿಕೆ ಮಾಡಿದರೆ, ಮುಂದೆ ಅದು ಸಾವಿರ ಪಟ್ಟಾಗಿ ಯಾವುದೋ ರೂಪದಲ್ಲಿ ಮರಳಿ ಬರುವುದರಲ್ಲಿ‌ ಸಂಶಯವಿಲ್ಲ.‌ ಏಕೆಂದರೆ, ಪ್ರಕೃತಿ‌ ಮಾತೆ ಜೀವಂತವಾಗಿದ್ದಾಳೆ, ಯಾರು ಯಾವುದಕ್ಕೆ ಯೋಗ್ಯರೋ ಅದನ್ನು ಪ್ರಕೃತಿ ಮಾತೆ ಖಂಡಿತ ದಯಪಾಲಿಸುವಳು.‌..ಯೋಚಿಸಿ!

...........................................ಬಸವರಾಜ ಬಿರಾದಾರ

ಸಂಸ್ಥಾಪಕರು, 

ಅಭೀಃ ಫೌಂಡೇಶನ್ (ಋಷಿ- ಕೃಷಿ ಸಂಸ್ಕೃತಿ ಪುನಶ್ಚೇತನ)

9449303880

missionsavesoil.com


ಜೋಡೆತ್ತಿನ ರೈತರ ಹಿತಚಿಂತನೆ


  ಇಂದು‌ ಜೊಡೆತ್ತಿನ ರೈತರನ್ನು ಪ್ರೋತ್ಸಾಹಿಸುವ ಕೆಲಸಕ್ಕಿಂತ ಮಹಾ ಪುಣ್ಯದ ಕೆಲಸ ಇನ್ನೊಂದಿಲ್ಲವೇ?ನಾವು ಮಾಡುವ ಯಾವ ಕೆಲಸವು ನಮ್ಮ‌ ಹಾಗೂ ಪ್ರಕೃತಿಯ ಜೀವಂತಿಕೆಯನ್ನು ಹೆಚ್ಚಿಸುವುದೋ, ಅದುವೇ ಪುಣ್ಯದ ಕೆಲಸ. ನಾವು ಮಾಡುವ ಯಾವ ಕೆಲಸವು ನಮ್ಮ‌ ಹಾಗೂ ಪ್ರಕೃತಿಯ ಜೀವಂತಿಕೆಯನ್ನು ನಾಶಮಾಡುವುದೋ, ಅದುವೇ ಪಾಪದ ಕೆಲಸ. ಪುಣ್ಯ ಹಾಗೂ ಪಾಪದ ಕೆಲಸದ ಪರಿಣಾಮ ನಮ್ಮನ್ನು ಸದಾ ಹಿಂಬಾಲಿಸುತ್ತಿರುತ್ತದೆ. ಅದಕ್ಕೆ ತಕ್ಕ ಪ್ರತಿಫಲವನ್ನು ನಾವು ಮುಂದೆ ಅನುಭವಿಸಲೇ ಬೇಕಾಗುವುದು.


ಪ್ರಕೃತಿ ಮಾತೆಯು ನೀವು ನನ್ನನ್ನು ಉಳಿಸಿದರೆ ಮಾತ್ರ ನಾನು ನಿಮ್ಮನ್ನು ಉಳಿಸುವೆ ಎಂದು ಕೆಲವೊಂದು ಪ್ರಕೃತಿ ವಿಕೋಪಗಳ ಮೂಲಕ ಎಚ್ಚರಿಸುತ್ತಿರುತ್ತಾಳೆ. ಪ್ರಕೃತಿ ಮಾತೆಯ ಮಾತನ್ನು ಆಲಿಸಿ ಪ್ರಕೃತಿಗೆ ಪೂರಕವಾಗಿ ನಡೆಯುವುದೇ ಪುಣ್ಯದ ಕೆಲಸ.  ಮಾನವನ ಅಜ್ಞಾನದ ನಡೆಯಿಂದ ಪ್ರಕೃತಿ ಮಾತೆಯ ಜೀವಂತಿಕೆ 70 ಪ್ರತಿಶತ ನಾಶವಾಗಿದೆ.‌ ಅಂದರೆ, ಭೂಮಿಯ ಮೇಲಿನ 70 ಪ್ರತಿಶತ ಜೀವರಾಶಿಗಳು ಈಗಾಗಲೇ‌‌ ನಾಶವಾಗಿವೆ. ಉಳಿದ 30 ಪ್ರತಿಶತ ಜೀವರಾಶಿಗಳಲ್ಲಿ ಮಾನವನೂ ಕೂಡ ಇದ್ದು, ಅವನ ನಾಶದ ದಿನಗಳೂ ಕೂಡ ಹತ್ತಿರವಾಗುತ್ತಿವೆ. ಏಕೆಂದರೆ,  ನಮ್ಮ ಮನೆಗಳ ಸದಸ್ಯರಾಗಿ ದುಡಿದು ಯಾವುದೋ ರೀತಿಯಲ್ಲಿ ನಮ್ಮನ್ನು ಪೋಷಿಸಿದ ಜೋಡೆತ್ತುಗಳ ಸಂತತಿ ನಾಶವಾಗುವ ಹಂತ ತಲುಪಿದೆ. ದೇಶದಲ್ಲಿ ದಿನಾಲು 9 ಲಕ್ಷ ಹಸುಗಳು ಕಾಸಾಯಿಖಾನೆಯ ಪಾಲಾಗುತ್ತಿವೆ. ಜೋಡೆತ್ತುಗಳನ್ನು ಸಾಕಾಣಿಕೆ ಮಾಡುವವರ ಸಂಖ್ಯೆ ಕಡಿಮೆಯಾಗುತ್ತಿರುವ ಕಾರಣ, ಬಹುತೇಕ ಹೋರಿಕರುಗಳು ಕಟುಕರ ಕತ್ತಿಗೆ ಕುತ್ತಿಗೆ ನೀಡುವ ಪರಿಸ್ಥಿತಿ ಬಂದೊದಗಿದೆ. ಈ ಪರಿಸ್ಥಿತಿಗೆ ಮೂಲ ಕಾರಣ ಜೋಡೆತ್ತಿನ ಕೃಷಿಗೆ ವಿರುದ್ಧವಾದ ಶಿಕ್ಷಣ ಪದ್ಧತಿ, ಜನಪ್ರೀಯ ಯೋಜನೆಗಳು ಹಾಗೂ ಕಾನೂನುಗಳಾಗಿವೆ. 


ಅನೇಕ ರೀತಿಯ ವಿರೋಧಗಳ ಮಧ್ಯೆಯೂ ಕೂಡ ಸ್ವ ಇಚ್ಛಾಶಕ್ತಿಯಿಂದ ಎತ್ತು ಸಾಕಾಣಿಕೆ ಮಾಡುತ್ತಿರುವ ರೈತರನ್ನು ಮಹಾನ್ ಸಂತರಿಗೆ ಸಮಾನವಾಗಿ ಕಂಡು ನಾವಿಂದು ಗೌರವಿಸಬೇಕಾಗಿದೆ. ಏಕೆಂದರೆ, ಇಂದು ಪ್ರಕೃತಿ ಮಾತೆಯ ಪೋಷಣೆಯ ಕೆಲಸದಲ್ಲಿ ತೊಡಗಿದವರಲ್ಲಿ ಜೊಡೆತ್ತಿನ ರೈತರು ಮೊದಲ ಸ್ಥಾನದಲ್ಲಿದ್ದಾರೆ. ಪ್ರಕೃತಿ ಮಾತೆಯ ಪ್ರೀತಿಯ ಪುತ್ರರು ಜೋಡೆತ್ತಿನ‌ ರೈತರಾಗಿದ್ದಾರೆ. ಪ್ರಕೃತಿ ಮಾತೆಗೆ ಪೂರಕವಾಗಿ ಬದುಕಿ ತನ್ನ ಮುಂದಿನ ಪೀಳಿಗೆಗೆ ಫಲವತ್ತಾದ ಭೂಮಿ ಬಿಟ್ಟು ಹೋಗುವವರು ಜೋಡೆತ್ತಿನ ರೈತರಾಗಿದ್ದಾರೆ. 


ಇಂದಿನ ಸಮಾಜದಲ್ಲಿ ಜೊಡೆತ್ತಿನ ರೈತರನ್ನು ಗುರುತಿಸಿ‌ ಗೌರವಿಸುವುದೆಂದರೆ ದೇವಸ್ಥಾನಗಳಲ್ಲಿ ಪ್ರತಿಷ್ಠಾಪನೆಗೊಂಡ ನಂದಿಗಳಿಗೆ  ಸಹಸ್ರ ಬಾರಿ ಪೂಜೆ ನೆರವೇರಿಸಿದಂತೆಯೇ ಸರಿ. ಏಕೆಂದರೆ, ನಂದಿಯ ಸಂತತಿಯನ್ನು ಭೂಮಿಯ ಮೇಲೆ ಉಳಿಸುವ ಜವಾಬ್ದಾರಿಯನ್ನು ಹೊತ್ತವರು ಜೊಡೆತ್ತಿನ ರೈತರಾಗಿದ್ದಾರೆ. 


ಯಾವುದೋ ಕಾರಣಕ್ಕಾಗಿ ಮುಂದಿನ ಒಂದು ತಿಂಗಳಲ್ಲಿ ಮಾನವ ಕುಲವು ನಾಶವಾದರೆ, ಮುಂದಿನ ಕೆಲವು ವರ್ಷಗಳಲ್ಲಿ ಎತ್ತುಗಳ ಸಂತತಿ ಇಮ್ಮಡಿಯಾಗುತ್ತದೆ. ಏಕೆಂದರೆ, ಮನುಷ್ಯ ಎತ್ತುಗಳನ್ನು ಕಟ್ಟಿ ಆಳುತ್ತಿದ್ದಾನೆ.‌ ಮಾನವನೇ ಇಲ್ಲವಾದರೆ, ಅವುಗಳ ಸಂತತಿ‌ ಖಂಡಿತ ಹೆಚ್ಚಾಗುತ್ತದೆ. ಎತ್ತುಗಳು ಉಳಿದರೆ ರೈತನ‌ ಮನೆಯಲ್ಲಿ ಉಳಿಯಬೇಕು, ಇಲ್ಲವಾದರೆ ಕಾಸಾಯಿಖಾನೆಯ ಪಾಲಾಗಬೇಕು, ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ, ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವು ಪ್ರತಿಯೊಬ್ಬರೂ ಕೂಡ ಮೂಕ‌ ಬಸವಣ್ಣಗಳು ಕಾಸಾಯಿಖಾನೆಯ ಪಾಲಾಗುತ್ತಿರುವುದಕ್ಕೆ  ಜವಾಬ್ದಾರರಾಗಿದ್ದೇವೆ. ಅದಕ್ಕಾಗಿ, ಜೋಡೆತ್ತುಗಳ ರಕ್ಷಣೆಯ ಜವಾಬ್ದಾರಿಯನ್ನು ನಾವೆಲ್ಲರೂ ಕೂಡಿ ಹೊರಬೇಕಾಗಿದೆ. 


ಯಾವುದನ್ನು ಉಳಿಸಿದರೆ ಬಹು ಸಂಖ್ಯೆ ಜೀವರಾಶಿಗಳಿಗೆ  ಒಳಿತಾಗುವುದೋ, ಅದುವೇ ಪ್ರಕೃತಿ ಮಾತೆಯ ಕಾರ್ಯ.‌ ಬಹು ಸಂಖ್ಯೆ ಜೀವರಾಶಿಗಳನ್ನು ಪೋಷಿಸಿ ಪ್ರಕೃತಿ ಮಾತೆಯನ್ನು ಜೀವಂತವಾಗಿ ಇಡುವ ಕೆಲಸವನ್ನು ಜೊಡೆತ್ತುಗಳು ಮಾಡುವಷ್ಟು ಮತ್ತಾವವು ಕೂಡ ಮಾಡಲಾರವು. ಇದಕ್ಕೆ ಸಾಕ್ಷಿ ಬೇಕಾದರೆ, ಜಮೀನಿನಲ್ಲಿ ಬಿದ್ದಿರುವ ಒಂದು ದಿನದ ಸೆಗಣಿಯನ್ನು ಪರೀಕ್ಷಿಸಿದರೆ, ಅದರಲ್ಲಿ ಅದೆಷ್ಟೋ ಜೀವರಾಶಿಗಳು ಆಶ್ರಯ ಪಡೆದಿರುವುದನ್ನು ಕಾಣುತ್ತೇವೆ. ಹಾಗಾಗಿ,‌ ಜೊಡೆತ್ತಿನ ಪೋಷಣೆ  ಮಾಡುತ್ತಿರುವ ರೈತರ ಹೆಗಲಿಗೆ ಹೆಗಲಾಗಿ ನಿಲ್ಲುವ ಕಾರ್ಯವನ್ನು ಪ್ರಜ್ಞಾವಂತರು ಮಾಡಬೇಕಾಗಿದೆ. ಇಂದು ನಮ್ಮಲ್ಲಿರುವ ವಿದ್ಯೆ ಹಾಗೂ ಹಣವು ಅತ್ಯಂತ ಯೋಗ್ಯ ಕೆಲಸಕ್ಕೆ ಬಳಕೆಯಾಗಿ ಎಲ್ಲ ದೇವಾನುದೇವತೆಗಳ‌ ಕೃಪೆಗೆ ಪಾತ್ರರಾಗುವ ಕಾರ್ಯವೇ ಜೊಡೆತ್ತುಗಳನ್ನು ಉಳಿಸುವ ಕಾರ್ಯವಾಗಿದೆ. ಖಂಡಿತ, ಜೋಡೆತ್ತು ಸಾಕಾಣಿಕೆ ಮಾಡುವ ರೈತರನ್ನು ಗುರುತಿಸಿ ಸನ್ಮಾನಿಸುವ ಕೆಲಸವೇ ಮಹಾ ಪುಣ್ಯದ ಕೆಲಸವಾಗಿದೆ...ಯೋಚಿಸಿ!

...........................................ಬಸವರಾಜ ಬಿರಾದಾರ

ಸಂಸ್ಥಾಪಕರು, 

ಅಭೀಃ ಫೌಂಡೇಶನ್ (ಋಷಿ- ಕೃಷಿ ಸಂಸ್ಕೃತಿ ಪುನಶ್ಚೇತನ)

9449303880

missionsavesoil.com


ಜೋಡೆತ್ತಿನ ರೈತರ ಹಿತಚಿಂತನೆ


 ಭಾರತೀಯ ಕೃಷಿ ಸಂಸ್ಕೃತಿ ಪುನಶ್ಚೇತನದ ಸಾಧ್ಯತೆ ಎಲ್ಲಿದೆ?ಭಾರತ ದೇಶ ಅತೀ ಪುರಾತನವಾದ ಕೃಷಿ ಸಂಸ್ಕೃತಿ ಹೊಂದಿರುವುದಕ್ಕೆ ಮೂಲ ಕಾರಣ ಜೋಡೆತ್ತಿನ ಕೃಷಿಯಾಗಿದೆ. ಜೊಡೆತ್ತಿನ ಕೃಷಿಯನ್ನು ಮೂಲ ಕೇಂದ್ರವನ್ನಾಗಿ ಇಟ್ಟುಕೊಂಡು ನಾಗರೀಕತೆಗಳನ್ನು ನಿರ್ಮಾಣ ಮಾಡಲು ಭಾರತೀಯ ಋಷಿ ಮುನಿಗಳು ಹಿಂದಿನಿಂದಲೂ ಪ್ರಯತ್ನಿಸಿದ್ದಾರೆ. ಆದರೆ, ಆಧುನಿಕ ಜಗತ್ತಿನ ತೀವ್ರ ಓಟದಲ್ಲಿ ಜೊಡೆತ್ತಿನ ಕೃಷಿಯ ಮಹತ್ವ ಅರಿತು ನಡೆಯುವುದರಲ್ಲಿ ನಾವೆಲ್ಲರೂ ವಿಫಲವಾದಂತಾಗಿದೆ. ಬ್ರಿಟೀಷರು ಭಾರತೀಯ ಶಿಕ್ಷಣ ವ್ಯವಸ್ಥೆಯನ್ನು ನಾಶಮಾಡಿ, ಕೇವಲ ಸ್ಪರ್ಧಾತ್ಮಕ ಶಿಕ್ಷಣವನ್ನು ಬಿಟ್ಟು ಹೋಗಿರುವುದು ನಾವಿಂದು ನಮ್ಮ  ಕೃಷಿ ಸಂಸ್ಕೃತಿಯನ್ನು ಮರೆತು‌ ನಡೆಯುತ್ತಿರುವುದಕ್ಕೆ ಮೂಲ ಕಾರಣವಾಗಿದೆ. 


"ನಾವು ಯಾವ ವಸ್ತುವನ್ನು ಎಲ್ಲಿ ಕಳೆದುಕೊಂಡಿರುವೆವೋ ಅಲ್ಲಿ ಹುಡುಕಿದರೆ ಮಾತ್ರ ಸಿಗುತ್ತದೆ" ಎಂಬ ಮಾತಿನಂತೆ, ನಾವು ಜೋಡೆತ್ತಿನ ಕೃಷಿಯನ್ನು ನಮ್ಮ ಶಿಕ್ಷಣದ ಪಠ್ಯದಲ್ಲಿ ಮುಖ್ಯ ವಿಷಯವನ್ನಾಗಿಸಬೇಕಾಗಿದೆ. ಜೋಡೆತ್ತಿನ ಕೃಷಿ ಪುನಶ್ಚೇತನದಿಂದ ಸಮಾಜದಲ್ಲಿ ಎಷ್ಟೆಲ್ಲ ಉದ್ಯೋಗಗಳು ಸೃಷ್ಟಿಯಾಗುತ್ತವೆ ಎಂಬುದನ್ನು ಬಹು ಜನರಿಗೆ ತಿಳಿಸಬೇಕಾಗಿದೆ. ಶಿಕ್ಷಣವು ಸಮಾಜದ ಭವಿಷ್ಯದ ನಿರ್ಮಾತೃವಾಗಿದೆ. ಯಾವಾಗ ಶಿಕ್ಷಣವು ಪ್ರಕೃತಿಗೆ ಪೂರಕವಾಗಿರುವುದಿಲ್ಲವೋ ಆಗ, ನಿಸರ್ಗಕ್ಕೆ ವಿರುದ್ಧವಾಗಿ ಕೆಲಸ‌ ಮಾಡುವ ಬಹು ಜನರು ಸೃಷ್ಟಿಯಾಗುತ್ತಾರೆ. ಇಂದಿನ ಪ್ರಕೃತಿಯ ವಿನಾಶಕ್ಕೆ ಮೂಲ‌ ಕಾರಣವೇ ಇಂದಿನ ಶಿಕ್ಷಣ ಪದ್ಧತಿಯಾಗಿದೆ. ಪ್ರಕೃತಿಯ ಅವನತಿಯ ಕುರಿತು ಎಲ್ಲರಿಗೂ ಸ್ವಲ್ಪ ಮಟ್ಟಿನ ಅರಿವಿದೆ.‌ ಆದರೆ, ಇಂದಿನ ಅಧಿಕಾರ ಶಾಹಿ ವ್ಯವಸ್ಥೆಯಲ್ಲಿ ಏನನ್ನೂ ಕೂಡ ಮಾಡಲಾಗದ ತೊಳಲಾಟದಲ್ಲಿ ಪ್ರಜ್ಞಾವಂತರು ದಿನಗಳನ್ನು ದೂಡುವಂತಾಗಿದೆ.


ಭಾರತ ದೇಶದ ಶಿಕ್ಷಣ ಪದ್ಧತಿಯಲ್ಲಿ ಬದಲಾವಣೆ ತರಬೇಕಾದರೆ, ಮೊದಲು ನಾವೆಲ್ಲರೂ ಯಾವುದಾದರೂ ಒಂದು ಮೂಲವನ್ನು ಹಿಡಿದು ಒಂದಾಗಬೇಕಿದೆ. ನಮ್ಮ ಜಾತಿ, ಮತ‌ ಹಾಗೂ ಪಕ್ಷ ಭೇದಗಳನ್ನು ಮರೆತು ಒಂದಾಗಿ ಒಮ್ಮತದ ಅಭಿಪ್ರಾಯಕ್ಕೆ ಬರುವ ಅವಶ್ಯಕತೆಯಿದೆ. ನಮ್ಮ‌ ಎಲ್ಲಾ ಭೇದ ಭಾವಗಳನ್ನು ಬದಿಗಿಟ್ಟು ನಾವು ಒಂದುಗೂಡುವಂತೆ ಮಾಡುವ ಶಕ್ತಿ ನಾಲ್ಕು ಕಾಲಿನ ಮೂಕ‌ ಬಸವಣ್ಣನಿಗಿದೆ ಎಂಬುದು ಸ್ಪಷ್ಟವಾಗುತ್ತಿದೆ. ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಆಶಯದಂತೆ ಜೊಡೆತ್ತಿನ ಸಂತತಿ ಉಳಿಸುವ ಉದ್ದೇಶದಿಂದ, ಅವರ ಜನ್ಮ ಸ್ಥಳವಾದ ಬಿಜ್ಜರಗಿಯಿಂದ  ಪ್ರಾರಂಭಿಸಿದ 'ನಂದಿ ಯಾತ್ರೆ‌' ಎಂಬ ಅಭಿಯಾನಕ್ಕೆ ಜನರಿಂದ ದೊರೆತ ದೊಡ್ಡ ಬೆಂಬಲವು ಇದಕ್ಕೆ ನಿದರ್ಶನವಾಗಿದೆ. 


ಇಂದಿನ ಆಧುನಿಕ‌ ಜಗತ್ತು ಕಂಡ ಮಹಾನ್ ಋಷಿಗಳಾದ ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರು ಏಕೆ ಜೋಡೆತ್ತಿನ ಕೃಷಿಕರಿಗೆ ಮಹತ್ವ ನೀಡುತ್ತಿದ್ದರು ಎಂಬುದರ ಕುರಿತು ನಾವೆಲ್ಲರೂ ಚಿಂತನೆ ಮಾಡಬೇಕಾಗಿದೆ. ಸದ್ಗುರು ಜಗ್ಗಿ ವಾಸುದೇವ ಅವರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು 30 ಸಾವಿರ ಕಿಲೋಮೀಟರ್ ಬೈಕ್ ಮೇಲೆ ಸಂಚರಿಸಿ ಜಗತ್ತಿನಾದ್ಯಂತ 'ಮಣ್ಣು ಉಳಿಸಿ' ಅಭಿಯಾನ ಪ್ರಾರಂಭಿಸಿದರು. ಮಣ್ಣು ಉಳಿಯಬೇಕಾದರೆ‌ ಮಣ್ಣು ಉಳಿಸುತ್ತಿರುವ ಜೋಡೆತ್ತಿನ ರೈತರಿಗೆ ಹಾಗೂ ಸಾವಯವ ರೈತರಿಗೆ ಪೂರಕವಾದ" ಮಣ್ಣು ಪುನಶ್ಚೇತನ ಕಾನೂನು" ಜಾರಿಯಾಗಬೇಕೆಂದು ಸತತವಾಗಿ ಪ್ರಯತ್ನಿಸುತ್ತಿದ್ದಾರೆ. ಇದರ ಜೊತೆಗೆ, ಜಗತ್ತಿನಲ್ಲಿ ಅತೀ ದೊಡ್ಡ ನಂದಿಯ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿ, ಎತ್ತುಗಳ ಮಹತ್ವ ಸಾರುವ ಪ್ರಯತ್ನ ಮಾಡಿದ್ದಾರೆ. ಇದೇ ರೀತಿ, ಅನೇಕ‌ ಅಧ್ಯಾತ್ಮಿಕ ಗುರುಗಳು ತಮ್ಮದೇ ಹಾದಿಯಲ್ಲಿ ಪ್ತಕೃತಿ ಉಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಇಂದು ಎಲ್ಲ ಆಧ್ಯಾತ್ಮಿಕ‌ ನಾಯಕರು ಒಂದು ಗೂಡಿ ಕೃಷಿ ಸಂಸ್ಕೃತಿಯ ಜೀವನಾಡಿಯಾದ ಜೊಡೆತ್ತಿನ ಕೃಷಿಯನ್ನು ಮುನ್ನೆಲೆಗೆ ತರುವ ಪ್ರಯತ್ನ ಮಾಡಬೇಕಿದೆ. 


ಭಾರತ ದೇಶದಲ್ಲಿರುವ 90 ಪ್ರತಿಶತ ಧಾರ್ಮಿಕ ಕೇಂದ್ರಗಳಲ್ಲಿ ನಂದಿಯ ಮೂರ್ತಿಯನ್ನು ಕಾಣುತ್ತೇವೆ. ಈ ಎಲ್ಲ ಧಾರ್ಮಿಕ ಕೇಂದ್ರಗಳ ಭಕ್ತರಿಗೆ ತಾವು ಜೀವಂತ ನಂದಿಯನ್ನು ಉಳಿಸಲು ಮುಂದಾದರೆ ಮಾತ್ರ, ತಾವು ನಂಬುವ ದೇವರು ಕೃಪೆ ತೋರುವರು ಎಂಬುದನ್ನು ತಿಳಿಸಬೇಕಾಗಿದೆ. ಇದು ಸಾಧ್ಯವಾದರೆ, ಕೆಲವೇ ದಿನಗಳಲ್ಲಿ ಜೋಡೆತ್ತಿನ ರೈತರಿಗೆ ಸೂಕ್ತ ಪರಿಹಾರ ದೊರೆಯಲು ಸಾಧ್ಯವಿದೆ. ಜೋಡೆತ್ತಿನ ಕೃಷಿ ಪುನಶ್ಚೇತನಕ್ಕಾಗಿ ನಂದಿಯನ್ನು ರಾಷ್ಟ್ರ ಪ್ರಾಣಿಯನ್ನಾಗಿ ಘೋಷಣೆ ಮಾಡಬೇಕಾಗಿದೆ. ಈ ಮೂಲಕ ರಾಷ್ಟ್ರ ಮಟ್ಟದ ದೊಡ್ಡ ಯೋಜನೆಯನ್ನು ರೂಪಿಸಿ ಜೋಡೆತ್ತು ಸಾಕಾಣಿಕೆದಾರರಿಗೆ ವಿವಿಧ ರೀತಿಯ ಪ್ರೋತ್ಸಾಹಗಳನ್ನು ನೀಡಬೇಕಾಗಿದೆ.


ಭಾರತೀಯ ಕೃಷಿ ಸಂಸ್ಕೃತಿಯ ಪುನಶ್ಚೇತನವು ಜೊಡೆತ್ತಿನ ಕೃಷಿಯ ಪುನಶ್ಚೇತನವನ್ನು ಅವಲಂಬಿಸಿದೆ. ಜೊಡೆತ್ತಿನ ಕೃಷಿಯ ಪುನಶ್ಚೇತನವು ಆಧ್ಯಾತ್ಮಿಕ ನಾಯಕರ ಒಗ್ಗೂಡುವಿಕೆಯನ್ನು ಅವಲಂಬಿಸಿದೆ. ಭಾರತ ದೇಶದ ಎಲ್ಲ ಧಾರ್ಮಿಕ‌ ಕೇಂದ್ರಗಳಲ್ಲಿರುವ ನಂದಿ ಮೂರ್ತಿಗಳು ಸಮಯ ಬಂದಾಗ ನಮ್ಮನ್ನೆಲ್ಲ ಎಚ್ಚರಿಸಿ ಒಂದು ಗೂಡಿಸುವುದಕ್ಕಾಗಿಯೇ ಇರುವವು. ಕಾಲ ಮಿಂಚುವ ಮುಂಚೆ ನಾವೆಲ್ಲ ನಂದಿ ಸಂಪತ್ತು ಉಳಿಸುವುದಕ್ಕಾಗಿ ಒಂದಾಗಬೇಕಿದೆ. ನಂದಿ ಸಂಪತ್ತನ್ನು ಉಳಿಸಿದರೆ ಮಾತ್ರ ನಮಗೆ ಮುಂದೆ ಅನ್ನ ಸಂಪತ್ತಿನ ಭದ್ರತೆಯ ಖಾತ್ರಿಯಿದೆ..ಯೋಚಿಸಿ!

...........................................ಬಸವರಾಜ ಬಿರಾದಾರ

ಸಂಸ್ಥಾಪಕರು, 

ಅಭೀಃ ಫೌಂಡೇಶನ್ (ಋಷಿ- ಕೃಷಿ ಸಂಸ್ಕೃತಿ ಪುನಶ್ಚೇತನ)

9449303880

missionsavesoil.com


ಜೋಡೆತ್ತಿನ ಕೃಷಿಕರ‌ ಹಿತಚಿಂತನೆ


 ಬಸವ ಧರ್ಮದ ಮೂಲ ಬೇರು 'ಜೋಡೆತ್ತಿನ ಕೃಷಿ' ಎಂಬ ಸತ್ಯದ ಅರಿವು ಬಹು ಜನರಿಗೆ ಆಗುವುದು ಯಾವಾಗ?  ಆಧುನಿಕತೆ ಹಾಗೂ ತಂತ್ರಜ್ಞಾನದ ಮಾಯಾಲೋಕದಲ್ಲಿ ಗ್ರಾಮಗಳಲ್ಲಿ ಅನ್ನ ಸಂಪತ್ತನ್ನು ಉಳಿಸುವ ಜೋಡೆತ್ತಿನ ಕೃಷಿಯ ಮಹತ್ವ ಬಹು ಜನರಿಗೆ ಅಷ್ಟು ಬೇಗನೆ ತಿಳಿಯದಾಗಿದೆ. ಬಯಲು ಸೀಮೆಯ ಗ್ರಾಮಗಳು ಸ್ವತಂತ್ರವಾಗಿ ಜೀವನ ಕಟ್ಟಿಕೊಳ್ಳಲು ಸಹಕಾರಿಯಾಗಿರುವ ಜೋಡೆತ್ತಿನ ಕೃಷಿಯು ಬಸವ ಧರ್ಮದ ಬುನಾದಿಯಗಿದೆ. ಜೋಡೆತ್ತಿನ ಕೃಷಿಯನ್ನು ಮೂಲಾಧಾರವಾಗಿ ಇಟ್ಟುಕೊಂಡು ಬಸವ ಧರ್ಮವನ್ನು ಸ್ಥಾಪಿಸಲಾಗಿದೆ. ಆದರೆ, ಇಂದು ಹಲವಾರು ಕಾರಣಗಳಿಂದ ಜೋಡೆತ್ತಿನ ಕೃಷಿ ವಿನಾಶದ ಅಂಚಿಗೆ ಬಂದು ನಿಂತಿದೆ. ಇದಕ್ಕೆ ಮೂಲ ಕಾರಣ ಡೀಸೆಲ್‌ ಹಾಗೂ ಪೆಟ್ರೋಲ್ ಆಧಾರಿತ ಯಂತ್ರ ಚಾಲಿತ ಕೃಷಿ ಮೇಲುಗೈ ಪಡೆದಿರುವುದಾಗಿದೆ. 


ಆಕಸ್ಮಿಕವಾಗಿ, ಇಂದಿನಿಂದ ಮುಂದಿನ ಒಂದು ವರ್ಷದ ವರೆಗೆ ಡೀಸೆಲ್‌ ಹಾಗೂ ಪೆಟ್ರೋಲ್ ಪೂರೈಕೆ ಸ್ಥಗಿತವಾದರೆ. ಮುಂದಿನ ಕೆಲವೇ ದಿನಗಳಲ್ಲಿ ಜೊಡೆತ್ತುಗಳಿಗೆ ಒಂದು ಟ್ರಾಕ್ಟರ್ ಗೆ ಇರುವ ಬೆಲೆ‌ ಕಂಡಿತ ಬರುವುದು. ಇಂದಿನ ಜಗತ್ತಿನ ಆಗುಹೋಗುಗಳನ್ನು ನೋಡಿದರೆ ಮೂರನೇ ಮಹಾಯುದ್ಧ ಘಟಿಸುವ ಸಾಧ್ಯತೆಯಿದೆ. ಆಗ ಡೀಸೆಲ್‌ ‌ಹಾಗೂ ಪೆಟ್ರೋಲ್ ಪೂರೈಕೆ ಸ್ಥಗಿತವಾಗಿ ನಾವಿಂದು ಬಳಸುವ ಎಲ್ಲಾ ವಾಹನಗಳ‌ ಚಲನೆ ಕೂಡಲೇ ಸ್ಥಗಿತವಾಗುವುದು. ಇಂತಹ ಸಂದರ್ಭದಲ್ಲಿ, ಜೋಡೆತ್ತಿನ ಬಂಡಿ‌ ಹಾಗೂ ಜೋಡಿತ್ತಿನ ಕೃಷಿಯನ್ನು ಅವಲಂಬಿಸಬೇಕಾಗುವುದು. ಆಗ ಜೊಡೆತ್ತಿನ ಕೃಷಿಕರ ಬೆಲೆ ಬಹು ಜನರಿಗೆ ಖಂಡಿತ ಅರಿವಾಗಲು ಪ್ರಾರಂಭಿಸುವುದು.


ಜೋಡೆತ್ತಿನ ಕೃಷಿಯನ್ನು  ಬುನಾದಿಯನ್ನಾಗಿ ಇಟ್ಟುಕೊಂಡು ಅಂದು‌ ಬಸವಣ್ಣನವರು ಸ್ವತಂತ್ರ ಗ್ರಾಮಗಳನ್ನು ಕಟ್ಟಲು ಬಯಸಿದರು. ಆದರೆ, ನಾವಿಂದು ಕೇವಲ ವಚನಗಳ ರಕ್ಷಣೆಗಾಗಿ ಮುಂದಾಗಿ, ವಚನಗಳು ಯಾವ ಮೂಲ ತತ್ವದ ಮೇಲೆ‌ ನಿರ್ಮಾಣವಾದವು ಎಂಬುದಕ್ಕೆ  ಗಮನ ಹರಿಸುವುದರಲ್ಲಿ ಎಡವಿದ್ದೇವೆ.


ಬಯಲು ಸೀಮೆಯ ಗ್ರಾಮೀಣ ಜನರು ಎಷ್ಟು ಸ್ವತಂತ್ರ ಜೀವನ ಕಟ್ಟಿಕೊಳ್ಳುವರೋ ಅಷ್ಟು ಬಸವ ತತ್ವ ಕೆಲಸ‌ ಮಾಡುತ್ತಿದೆ ಎಂದು ಅರ್ಥ. ಗ್ರಾಮಗಳು ಸ್ವತಂತ್ರ ಜೀವನ‌ ಕಟ್ಟಿಕೊಳ್ಳಲು ಮೂಲ‌‌ ತಳಹದಿಯಾದ ಜೋಡೆತ್ತಿನ ಕೃಷಿ ವಿನಾಶದ ಅಂಚಿಗೆ ಬಂದು ನಿಂತಿದೆ. ಹಾಗಾದರೆ, ಬಸವ ತತ್ವವೂ ಕೂಡ ವಿನಾಶದ ಅಂಚಿಗೆ ಬಂದು ನಿಂತಿದೆ ಎಂದು ಅರ್ಥ. 


ಬಯಲು ಸೀಮೆಯ ಗ್ರಾಮಗಳ‌ ಜೀವಂತಿಕೆಗೆ ಕಾರಣವಾದ ಜೋಡೆತ್ತಿನ ಕೃಷಿ ನಶಿಸಿದಂತೆ ಗ್ರಾಮದ ಕೃಷಿ ಭೂಮಿ‌ ಫಲವತ್ತತೆ ಕಳೆದುಕೊಂಡು ಬರಡಾಗುವುದು. ಗ್ರಾಮದ ಹಳ್ಳಗಳು ಕೆಲವು ದಿನಗಳ‌ ವರೆಗೂ ಕೂಡ ಹರಿಯದೆ ಬತ್ತುವವು. ಬಾವಿಗಳು ಬತ್ತುವವು. ಕೊಳವೆಬಾವಿಗಳು ತಾತ್ಕಾಲಿಕವಾಗಿ ನೀರನ್ನು ನೀಡುವವು. ಈ ಎಲ್ಲ ಕಾರಣಗಳಿಂದ ಮನುಷ್ಯ ಹಲವು ರೋಗರುಜಿನಗಳಿಗೆ ತುತ್ತಾಗಿ ಬದುಕುಳಿಯುವ ಸಾಧ್ಯತೆ ಕ್ಷೀಣಿಸುತ್ತಾ ಸಾಗುವುದು.

 

ದಿನ ಕಳೆದಂತೆ ಬಯಲು ಸೀಮೆಯ ಗ್ರಾಮಗಳಲ್ಲಿ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆ ಗೋಚರಿಸುತ್ತಿದೆ. ಇದಕ್ಕೆ ಮೂಲ ಕಾರಣ, ಗ್ರಾಮಗಳಲ್ಲಿರುವ ಜೋಡೆತ್ತಿನ ಕೃಷಿಯ ನಾಶವಾಗಿದೆ. "ಅವಶ್ಯಕತೆಯು ಸತ್ಯ ಶೋಧನೆಯ ತಾಯಿ" ಎಂಬ ಮಾತಿನಂತೆ, ಮುಂದಿನ ದಿನಗಳಲ್ಲಿ ಗ್ರಾಮಗಳಲ್ಲಿ ಸಮಸ್ಯೆಗಳು ಹೆಚ್ಚಾದಂತೆ, ಸಮಸ್ಯೆಗೆ ಪರಿಹಾರ ಶೋಧನಾ ಕಾರ್ಯ ಬಹು ಜನರಿಂದ ಪ್ರಾರಂಭವಾಗುವುದು. ಆಗ, ಬಸವ ತತ್ವದ ಮೂಲ‌ ಬೇರಾದ ಜೋಡೆತ್ತಿನ ಕೃಷಿ‌ಯ ಮಹತ್ವ ಬಹು ಜನರಿಗೆ ಖಂಡಿತ ಅರಿವಾಗುವುದರಲ್ಲಿ ಸಂಶಯವಿಲ್ಲ.


ಗ್ರಾಮಗಳಲ್ಲಿ ಸಮಸ್ಯೆಗಳು ಕೈ ಮೀರಿ ಹೊಗುವ ಮುಂಚೆ, ಗ್ರಾಮಗಳಲ್ಲಿ ಉಳಿದಿರುವ ಜೊಡೆತ್ತಿನ ರೈತರಿಗೆ ಉಳ್ಳವರು ಪ್ರೋತ್ಸಾಹ ನೀಡಿ ಬಸವ ತತ್ವದ ಮೂಲ‌ ಬೇರು ನಾಶವಾಗದಂತೆ ನೋಡಿಕೊಳ್ಳಬಹುದಾಗಿದೆ.

...........................................ಬಸವರಾಜ ಬಿರಾದಾರ

ಸಂಸ್ಥಾಪಕರು, 

ಅಭೀಃ ಫೌಂಡೇಶನ್ (ಋಷಿ- ಕೃಷಿ ಸಂಸ್ಕೃತಿ ಪುನಶ್ಚೇತನ)

9449303880

missionsavesoil.com


ಜೋಡೆತ್ತಿನ ಕೃಷಿಕರ ಹಿತಚಿಂತನೆ


 ಬಸವ ಧರ್ಮದ ಬುನಾದಿಯು ಜೋಡೆತ್ತಿನ ಕೃಷಿಯಾಗಿದೆ. ಹಾಗಾದರೆ, ಜೋಡೆತ್ತಿನ ಕೃಷಿ ಉಳಿದರೆ ಮಾತ್ರ ಬಸವ ಧರ್ಮ ಉಳಿಯುವುದೇ? ಧರ್ಮವೆಂದರೆ ಆಯಾ ಪ್ರದೇಶದ ಪ್ರಕೃತಿಯನ್ನು ಅರಿತು ಅದರೊಂದಿಗೆ ಸಮತೋಲನೆಯಿಂದ ನಡೆಯುವ ಕಲೆ ಎಂದು ಅರ್ಥ.‌ ಅಂದರೆ, ಆಯಾ ಪ್ರದೇಶದ ಪ್ರಕೃತಿಯ ಚಲನೆಯನ್ನು ಅರಿತು  ಪ್ರಕೃತಿಗೆ ಪೂರಕವಾದ ಕಾನೂನುಗಳನ್ನು ಜಾರಿಗೊಳಿಸಿ, ಅವುಗಳನ್ನು ಅನುಷ್ಠಾನಕ್ಕೆ ತರುವುದೇ ಧರ್ಮ.‌ 


ಬಸವ ಧರ್ಮವು ಜೋಡೆತ್ತಿನ ಕೃಷಿಯ ಕಾಯಕ ತತ್ವದ ಮೇಲೆ ನಿಂತಿದೆ. ಜೋಡೆತ್ತಿನ ಕೃಷಿ ಕಾಯಕ ತತ್ವವನ್ನು ಸಮಾಜದಲ್ಲಿ ಪೋಷಿಸದೇ ಬಸವ ಧರ್ಮವನ್ನು ಖಂಡಿತ ಉಳಿಸಿಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ, ಜೋಡೆತ್ತಿನ ಕೃಷಿಯ ನಾಶದಿಂದ ಅನೇಕ ಕಾಯಕಗಳು ಸಮಾಜದಲ್ಲಿ ನಶಿಸಿ ಹೋಗಿ ನಿರುದ್ಯೋಗ ಸಮಸ್ಯೆ ತಾಂಡವವಾಡುವುದು. ಇಂದಿನ ನಿರುದ್ಯೋಗ ಸಮಸ್ಯೆಗೆ ಮೂಲ ಕಾರಣವೇ ಜೋಡೆತ್ತಿನ ಕೃಷಿಯ ನಾಶವಾಗಿದೆ. ಜೋಡೆತ್ತಿನ ಕೃಷಿಯ ಮಹತ್ವ ಅರಿತು ಜೋಡೆತ್ತಿನ ಕೃಷಿಕರನ್ನು ಪೋಷಿಸಿದರೆ ಮಾತ್ರ ಬಸವಣ್ಣನವರ ವಿಚಾರಧಾರೆಗಳಿಗೆ ಮಹತ್ವ ಬರಲು ಸಾಧ್ಯ. ಇಲ್ಲವಾದರೆ, ಬಸವಣ್ಣನವರು ಕೇವಲ ಕೆಲವು ಆಚರಣೆಗೆ ಮಾತ್ರ ಸೀಮಿತವಾಗುವರು. ಇದೇ ರೀತಿ‌ ಮುಂದುವರೆದರೆ, ಕೆಲವೇ‌ ವರ್ಷಗಳಲ್ಲಿ ಬಸವ ಧರ್ಮವು ತನ್ನ ಮಹತ್ವ ಕಳೆದುಕೊಳ್ಳುವುದರಲ್ಲಿ ಸಂಶಯವಿಲ್ಲ.


ಪ್ರಕೃತಿಯಲ್ಲಿರುವ ಪ್ರತಿಯೊಂದು ಜೀವರಾಶಿಯೂ ಕೂಡ ತಾನು ಪೂರ್ಣ ಸಾಮರ್ಥ್ಯದೊಂದಿಗೆ ಬೆಳೆದು ನಿಲ್ಲಲು ಪ್ರಯತ್ನಿಸುತ್ತಿರುತ್ತದೆ. ಅದರಲ್ಲಿ, ಮನುಷ್ಯನೂ ಕೂಡ ಒಬ್ಬನಾಗಿದ್ದಾನೆ. ಅವರವರ ಸಾಮರ್ಥ್ಯಕ್ಕೆ ಅನುಗುಣವಾಗಿ‌ ಬೆಳೆಯಲು ಸಮಾನ ಅವಕಾಶ ಕಲ್ಪಿಸುವುದೇ ಧರ್ಮ. 12 ನೇ ಶತಮಾನದಲ್ಲಿ ಬಸವಣ್ಣನವರು ಪ್ರತಿಯೊಬ್ಬರು ಅವರವರ ಸಾಮರ್ಥ್ಯಕ್ಕೆ ತಕ್ಕಂತೆ ಬಾಹ್ಯ ಹಾಗೂ ಆಂತರಿಕವಾಗಿ ಬೆಳೆಯಲು ಸಮಾನ ಅವಕಾಶ ಕಲ್ಪಸಲು ಪ್ರಯತ್ನಿಸಿದರು. ಈ ಪ್ರಯತ್ನಕ್ಕೆ ಜೊಡೆತ್ತಿನ ಕೃಷಿಯು ಭದ್ರ ಬುನಾದಿಯಾಗಿತ್ತು.‌  ಜೋಡೆತ್ತಿನ ಕೃಷಿಯು ಅತೀ ಪುರಾತನವಾದ ಇತಿಹಾಸ ಹೊಂದಿದ ಏಕೈಕ ಕೃಷಿಯಾಗಿದೆ. ಬಹು ಜನರು ಸೂಕ್ತ ಉದ್ಯೋಗ ಪಡೆದು ಬಾಹ್ಯ ಹಾಗೂ ಆಂತರಿಕವಾಗಿ  ಬೆಳೆಯಲು ಅವಕಾಶ ಕಲ್ಪಿಸುವುದೇ ಜೋಡೆತ್ತಿನ ಕೃಷಿ. ಈ ಮೂಲ ತತ್ವವನ್ನು ಅರಿತು ನಾಲ್ಕು ಕಾಲಿನ ಬಸವಣ್ಣನನ್ನು ಉಳಿಸಿಕೊಳ್ಳದೇ ಎರಡು ಕಾಲಿನ ಬಸವಣ್ಣನವರನ್ನು ಕೇವಲ ವಚನಗಳ ಮೂಲಕ ಉಳಿಸಿಕೊಳ್ಳಲು ಪ್ರಯತ್ನಿಸುವುದರಲ್ಲಿ ಯಾವುದೇ ಅರ್ಥವಿಲ್ಲ.


ಬಸವ ಧರ್ಮದ ಬುನಾದಿಯಾದ ಜೊಡೆತ್ತಿನ‌ ಕೃಷಿ  ಅಳಿವಿನ ಅಂಚಿನಲ್ಲಿ ಬಂದು ನಿಂತಿರುವುದು ಎಲ್ಲರಿಗೂ ತಿಳಿದ  ವಿಷಯವಾಗಿದೆ. ಇದೇ ಕಾರಣಕ್ಕೆ ಜೋಡೆತ್ತಿನ ಕೃಷಿ ಅವಲಂಬಿತ  ಉದ್ಯೋಗಗಳಾದ ಬಡಿಗತನ, ಗಾಣಿಗ, ಕಂಬಾರಿಕೆ, ಕುಂಬಾರಿಕೆ, ಚಮ್ಮಾರಿಕೆ ಹಾಗೂ ಈ ಮೂಲ ಉದ್ಯೋಗಗಳಿಗೆ ಪೂರಕವಾದ ಇತರ ಅನೇಕ ಗ್ರಾಮೀಣ ಉದ್ಯೋಗಗಳು ನಶಿಸಿ ಹೋಗುತ್ತಿರುವುದು ಎಲ್ಲರಿಗೂ ತಿಳಿದ ವಿಷಯವಾಗಿದೆ. ಇದೇ ಕಾರಣಕ್ಕೆ ಗ್ರಾಮದ ಜನರು ಎಲ್ಲದಕ್ಕೂ ಪರಾವಲಂಬಿಗಳಾಗುತ್ತಿದ್ದಾರೆ. ಇದು ಬಸವ ತತ್ವ ಆಧಾರಿತ ನಾಗರೀಕತೆಗಳ ವಿನಾಶದ ಮನ್ಸೂಚನೆಯಾಗಿದೆ. ಏಕೆಂದರೆ, ಜೋಡೆತ್ತು ಆಧಾರಿತ ಕೃಷಿ ಅನ್ನ ಸಂಪತ್ತನ್ನು ಉಳಿಸುವ ಕೃಷಿಯಾಗಿದೆ. ವಿಶ್ವ ಸಂಸ್ಥೆಯ ಅಂಕಿ ಅಂಶಗಳ ಪ್ರಕಾರ ಮುಂದಿನ ಕೆಲವೇ ವರ್ಷಗಳಲ್ಲಿ ನೀರು ಹಾಗೂ ಅನ್ನದ ಕೊರತೆ ತೀವ್ರವಾಗುವ ಸಾಧ್ಯತೆಯಿದೆ. ಇದಕ್ಕೆ ಮೂಲ‌ ಕಾರಣ ಬಸವ ಧರ್ಮದ ಬುನಾದಿಯಾದ ಜೊಡೆತ್ತಿನ ಕೃಷಿಯ ನಾಶವಾಗಿದೆ. ಜೋಡೆತ್ತಿನ ಕೃಷಿಯ ಮಹತ್ವವನ್ನು ಸದಾ ಸಾರಿ ಹೇಳುವ ಉದ್ದೇಶದಿಂದ ಪ್ರತಿಯೊಂದು ದೇವಸ್ಥಾನ,‌ ಮಠ ಹಾಗೂ ಆಶ್ರಮಗಳಲ್ಲಿ ನಂದಿ ಮೂರ್ತಿ ಪ್ರತಿಷ್ಠಾಪನೆ ಮಾಡಿರುವುದನ್ನು ನೋಡಿರುತ್ತೇವೆ.


ಹಿಂದೆ ರಾಜರು ಅಧಿಕಾರ ಹಸ್ತಾಂತರಿಸುವ ಸಂದರ್ಭದಲ್ಲಿ ಬಸವಣ್ಣನ ಮೂರ್ತಿ ಇರುವ ಧರ್ಮದಂಡ ಹಸ್ತಾಂತರಿಸುವ ಪ್ರಕ್ರಿಯೆ ಇತ್ತು. ಧರ್ಮವು ನಾಲ್ಕು ಕಾಲಿನ ಬಸವಣ್ಣನ ಮೇಲೆ‌ ನಿಂತಿದೆ ಎಂಬುದರ ಸೂಚಕವೇ  ಬಸವಣ್ಣನ ಮೂರ್ತಿ ಹೊಂದಿದ ಧರ್ಮದಂಡದ ಸಂಕೇತವಾಗಿದೆ. ಜೋಡೆತ್ತಿನ ಕೃಷಿಯ ಮಹತ್ವ ಅರಿತು ಅದನ್ನು ಪ್ರೋತ್ಸಾಹಿಸುವ ರಾಜನು ಧರ್ಮದ ಹಾದಿಯಲ್ಲಿ ನಡೆಯುತ್ತಿದ್ದಾನೆ‌ ಎಂಬ ಅರ್ಥವನ್ನು ಸೂಚಿಸುತ್ತಿತ್ತು.‌   ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ  ಯಾವ ರಾಜಕಾರಣಿಗಳು ಜೋಡೆತ್ತಿನ ಕೃಷಿಯ ಮಹತ್ವ ಅರಿತು ಅದಕ್ಕೆ ಪೂರಕ ಶಿಕ್ಷಣ, ಯೋಜನೆ ಹಾಗೂ ಕಾನೂನು ಜಾರಿಗೆ ತರಲು ಪ್ರಯತ್ನಿಸುವರೋ ಅವರು ಧರ್ಮದ ಹಾದಿಯಲ್ಲಿ ನಡೆಯುತ್ತಿದ್ದಾರೆ ಎಂದು ಅರ್ಥ ಮಾಡಿಕೊಳ್ಳಬೇಕು.


ಬಸವ  ಧರ್ಮದ ಬುನಾದಿಯಾದ ಜೋಡೆತ್ತಿನ ಕೃಷಿ ಉಳಿಸಿಕೊಳ್ಳಲು ಪ್ರಯತ್ನಿಸಿದರೆ ಮಾತ್ರ ಬಸವಣ್ಣನವರ ತತ್ವಕ್ಕೆ ಬೆಲೆ ನೀಡಿದಂತಾಗುತ್ತದೆ.‌ ಇಂದು ಜೋಡೆತ್ತಿನ ಕೃಷಿಗೆ ಪೂರಕ ವ್ಯವಸ್ಥೆ ನಾಶವಾಗಿರುವುದರಿಂದ, ರೈತರು ಅನಿವಾರ್ಯವಾಗಿ ಎತ್ತುಗಳನ್ನು ಮಾರಾಟ ಮಾಡುತ್ತಿದ್ದಾರೆ. ಅದರಲ್ಲಿ ಅನೇಕ ಎತ್ತುಗಳು ಕಾಸಾಯಿಖಾನೆಯ ಪಾಲಾಗುತ್ತಿವೆ. ಅದಕ್ಕಾಗಿ, ಪ್ರಜ್ಞಾವಂತರು ಹಾಗೂ ವಿವಿಧ ಸಂಘ-ಸಂಸ್ಥೆಗಳು ಜೊಡೆತ್ತಿನ ರೈತರ ನೆರವಿಗೆ ಬಂದು, ಅವರನ್ನು ವಿಶೇಷವಾಗಿ ಗುರುತಿಸಿ ಗೌರವಿಸುವ ಅವಶ್ಯಕತೆ ಬಂದೊದಗಿದೆ. ಸರ್ಕಾರವು ಜೊಡೆತ್ತಿನ ಕೃಷಿಕರಿಗೆ ಪ್ರತಿ ತಿಂಗಳು ದೊಡ್ಡ ಪ್ರಮಾಣದ ಪ್ರೋತ್ಸಾಹ ಧನ ನೀಡುವ ಯೋಜನೆ ಜಾರಿಗೊಳಿಸಿ ಬಸವ ಧರ್ಮದ ರಕ್ಷಣೆಗೆ ಮುಂದಾಗಬೇಕಿದೆ. ಈ ಮೂಲಕ ಬಸವ ಧರ್ಮದ ಬುನಾದಿಗೆ ಪೆಟ್ಟು ಬೀಳದಂತೆ ನೋಡಿಕೊಳ್ಳಬೇಕಾಗಿದೆ.  ಕಾಯಕವೇ ಕೈಲಾಸ ತತ್ವ ಆಧಾರಿತ ಜೀವನ ನಡೆಸುವ ಜೊಡೆತ್ತಿನ ಕೃಷಿಕರಿಗೆ ಸಮಾಜದಲ್ಲಿ ವಿಶೇಷ ಸ್ಥಾನಮಾನ ನೀಡಿದರೆ ಮಾತ್ರ ನಮ್ಮ ಮುಂದಿನ ಪೀಳಿಗೆಗೆ ಒಳ್ಳೆಯ ಭವಿಷ್ಯವಿದೆ. 


ಬನ್ನಿ, ಬಯಲು ಸೀಮೆಯ ನಾಗರೀಕತೆಗಳ ನಿರ್ಮಾತೃವಾದ ಜೋಡೆತ್ತಿನ ಕೃಷಿ ಉಳಿಸುವ ಮೂಲಕ ಬಸವಣ್ಣನವರ  ವಿಚಾರಧಾರೆಗಳನ್ನು ಉಳಿಸಲು ಮುಂದಾಗೋಣ.

...........................................ಬಸವರಾಜ ಬಿರಾದಾರ

ಸಂಸ್ಥಾಪಕರು, 

ಅಭೀಃ ಫೌಂಡೇಶನ್ (ಋಷಿ- ಕೃಷಿ ಸಂಸ್ಕೃತಿ ಪುನಶ್ಚೇತನ)

9449303880

missionsavesoil.com


ಎತ್ತುಗಳ ಸಂತತಿ ಉಳಿಯದಿದ್ದರೆ ಕಂಬಿ ಮಲ್ಲಯ್ಯನೂ ಕೂಡ ಉಳಿಯನು ಎತ್ತುಗಳು ಬಯಲು ಸೀಮೆಯ ನಾಗರೀಕತೆಗಳ ನಿರ್ಮಾಣಕ್ಕೆ ಮೂಲ ಕಾರಣೀಭೂತವಾಗಿವೆ. ಗ್ರಾಮಗಳಲ್ಲಿ ಸದಾ ಎತ್ತುಗಳ ಉಳಿಯಬೇಕು ಎಂಬ ಉದ್ದೇಶದಿಂದ ಕಂಬಿ ಮಲ್ಲಯ್ಯನನ್ನು ಪೂಜಿಸುವ ಸಂಪ್ರದಾಯವನ್ನು ನಮ್ಮ ಹಿಂದಿನ ಅಧ್ಯಾತ್ಮಿಕ ಗುರುಗಳು ಪರಿಚಯಿಸಿದ್ದಾರೆ. ಗ್ರಾಮದ ಎಲ್ಲ ಎತ್ತುಗಳ ಭಾವೈಕ್ಯದ ಸಂಕೇತ ಕಂಬಿ‌ ಮಲ್ಲಯ್ಯನಾಗಿದ್ದಾನೆ. ವರ್ಷಪೂರ್ತಿ ರೈತರಿಗೆ ಹೆಗಲು ನೀಡುವ ಜೋಡೆತ್ತುಗಳ ಪ್ರತೀಕವಾದ ಕಂಬಿಗೆ ಹೆಗಲು ನೀಡಿ ಶ್ರೀಶೈಲ ಮಲ್ಲಯ್ಯನ ವರೆಗೆ ಕೊಂಡೊಯ್ಯುವ ಸಂಪ್ರದಾಯವಿದೆ.‌ ಇದರಿಂದ, ಶ್ರೀಶೈಲ ಮಲ್ಲಯ್ಯ ಕಂಬಿಯ ಮೂಲಕ ಗ್ರಾಮಕ್ಕೆ ಆಗಮಿಸಿ ವರ್ಷಪೂರ್ತಿ ಮಾರ್ಗದರ್ಶನ ನೀಡುವನು ಎಂಬ ನಂಬಿಕೆ‌ ಜನರಲ್ಲಿದೆ.


ಯಾವಾಗ ಜನ ಪ್ರಜ್ಞೆಯ ಕೊರತೆಯಿಂದ ಅನ್ನ ಸಂಪತ್ತನ್ನು ಉಳಿಸುವ ಜೋಡೆತ್ತಿನ ಕೃಷಿ ಕಳೆದುಕೊಳ್ಳುವರೋ ಆಗ, ಕಂಬಿ ಮಲ್ಲಯ್ಯನು ಬಹು ಜನರನ್ನು ಎಚ್ಚರಿಸಿ ಜೋಡೆತ್ತಿನ ಕೃಷಿ ಉಳಿಸುವಂತೆ ಆಗಲಿ ಎಂಬ ದೂರದೃಷ್ಟಿಕೋನ ಕಂಬಿ ಮಲ್ಲಯ್ಯನ ಪೂಜಾ ಸಂಪ್ರದಾಯ ಹೊಂದಿದೆ.


ಕೃಷಿಕರು, ಬಡಗೇರರು, ಕಂಬಾರರು, ಕುಂಬಾರರು, ಗಾಣಿಗರು, ಸ್ವಾಮಿಗಳ ಸಮಾಜ ಹಾಗೂ ಇತರ ಅನೇಕ ಸಮಾಜಗಳು ಜೊಡೆತ್ತಿನ ಕೃಷಿಯನ್ನು ಅವಲಂಬಿಸಿ ಉಳಿದು ಬೆಳೆದು ಬಂದಿವೆ. ಇಂದು ಜೋಡೆತ್ತಿನ ಕೃಷಿ ನಾಶವಾದ ಕಾರಣ ಅನೇಕ ಸಮಾಜಗಳ ಮೂಲ ಉದ್ಯೋಗಗಳು ನಶಿಸಿ ಹೋಗುತ್ತಿವೆ. ಕಾರ್ಖಾನೆಗಳು ಬಹುಜನರಿಗೆ ಬಹು ದಿನಗಳ ವರೆಗೆ ಉದ್ಯೋಗ ನೀಡಲಾರವು. ಜೋಡೆತ್ತುಗಳು ಮಾತ್ರ ದೀರ್ಘಕಾಲದ ವರೆಗೆ ಬಹು ಜನರಿಗೆ ಉದ್ಯೋಗ ನಿಡಬಲ್ಲವು. ಇದೇ ಕಾರಣಕ್ಕೆ ಭಾರತವು ಅತೀ ಪುರಾತನವಾದ ನಾಗರೀಕತೆಗಳನ್ನು ಹೊಂದಿದ ದೇಶವಾಗಿದೆ.


ಬಹು ಜನರಿಗೆ ಉದ್ಯೋಗ ನೀಡುವ ಉದ್ಯೋಗದಾತರಾದ ಜೋಡೆತ್ತುಗಳನ್ನು ಸಾಕುವವರಿಗೆ ಸೂಕ್ತ ಪ್ರೋತ್ಸಾಹ ನೀಡುವ ಕಾನೂನು ಹಾಗೂ ಯೋಜನೆಗಳು ಇರದ ಕಾರಣ, ಅನೇಕರು ಎತ್ತುಗಳನ್ನು ಮಾರಾಟ ಮಾಡುತ್ತಿದ್ದಾರೆ. ಅದರಲ್ಲಿ ಅನೇಕ ಎತ್ತುಗಳು ಕಾಸಾಯಿಖಾನೆಯ ಪಾಲಾಗುತ್ತಿವೆ. ಅದಕ್ಕಾಗಿ, ಎತ್ತು ಸಾಕಾಣಿಕೆದಾರರಿಗೆ ಪ್ರೋತ್ಸಾಹ ಧನ ನೀಡುವ ಯೋಜನೆ ಜಾರಿಗೆ ತಂದು ಬಹು ಜನರ ಉದ್ಯೋಗವನ್ನು ಉಳಿಸಿಕೊಳ್ಳಬೆಕಾದ ಅವಶ್ಯಕತೆ ಬಂದೊದಗಿದೆ. 


ಕಂಬಿ ಮಲ್ಲಯ್ಯನ ಪೂಜೆ ಮಾಡುವ ಭಕ್ತರು ಹಾಗೂ ಶ್ರೀಶೈಲ ಪಾದಯಾತ್ರಿಗಳು ತಮ್ಮ ಗ್ರಾಮದ ಎತ್ತುಗಳ ಸಂತತಿ ಉಳಿಸಿಕೊಳ್ಳುವ ಸಂಕಲ್ಪವನ್ನು ಮಾಡಬೇಕಾಗಿದೆ. ಅಂದಾಗ ಮಾತ್ರ ಅಂತಹ ಭಕ್ತರಿಗೆ ಸಕಲ ದೇವರುಗಳು ಒಲಿಯಲು ಸಾಧ್ಯ. ಇಲ್ಲವಾದರೆ ನಾವು ಆಚರಿಸುವ ಯಾವ ಸಂಪ್ರದಾಯವೂ ಕೂಡ ಮುಂದಿನ ಕೆಲವು ವರ್ಷಗಳಲ್ಲಿ ಉಳಿಯಲು ಸಾಧ್ಯವಿಲ್ಲ. ಜೋಡೆತ್ತಿನ ಕೃಷಿಯ ನಾಶದಿಂದ ಬಹುಜನರ ಉದ್ಯೋಗ ಹಾಗೂ ಅನ್ನ ಸಂಪತ್ತು ನಾಶವಾಗುವ ದಿನಗಳು ಬಹಳ ದೂರವಿಲ್ಲ. ಇಂತಹ ಸಂದರ್ಭದಲ್ಲಿ ನಾವು ಪೂಜಿಸುವ ಕಂಬಿ ಮಲ್ಲಯ್ಯನಾದರೂ ಉಳಿಯಲು ಸಾಧ್ಯವೇ? ಒಮ್ಮೆ ನಾವೆಲ್ಲರೂ ಯೋಚಿಸಿಬೇಕಾದ ಸಂಗತಿ ಇದಾಗಿದೆ.

...........................................ಬಸವರಾಜ ಬಿರಾದಾರ

ಸಂಸ್ಥಾಪಕರು, 

ಅಭೀಃ ಫೌಂಡೇಶನ್ (ಋಷಿ- ಕೃಷಿ ಸಂಸ್ಕೃತಿ ಪುನಶ್ಚೇತನ)

9449303880

missionsavesoil.com


ಜೋಡೆತ್ತಿನ ಕೃಷಿಕರ ಭಾವೈಕ್ಯದ ಸಂಕೇತವಾದ ಕಂಬಿ ಮಲ್ಲಯ್ಯನನ್ನು ಪಾದಯಾತ್ರೆ ಮೂಲಕ ಶ್ರೀಶೈಲ ಮಲ್ಲಯ್ಯನವರೆಗೆ ಹೊತ್ತು ಸಾಗುವ ಸಮಾಜ ಸೇವಕರು "ನಂದಿ ವೀರ" ಬಿರುದು ಪಡೆಯಲು ಅರ್ಹರೇ? 


ಭಾರತ ದೇಶ ಅತ್ಯಂತ ಪುರಾತನ ಕೃಷಿ ಸಂಸ್ಕೃತಿಯನ್ನು ಹೊಂದಿರುವುದಕ್ಕೆ ಮೂಲ ಕಾರಣ, ನಮ್ಮ ಗ್ರಾಮಗಳಲ್ಲಿ ಜೋಡೆತ್ತಿನ ಕೃಷಿಯನ್ನು ಪೋಷಿಸುತ್ತಾ ಬಂದ ಗುರು-ಶಿಷ್ಯ ಪರಂಪರೆಯಾಗಿದೆ. ಯಾರು ತಾವು ಬಹು ಜನರ ಒಳಿತಿಗಾಗಿ ಶ್ರಮವಹಿಸಿ ದುಡಿಯುತ್ತಾ ಯೋಗ್ಯ ಮಾರ್ಗದಲ್ಲಿ ನಡೆಯುವರೋ ಅವರು ಇತರರಿಗೆ ಗುರುವಾಗುವರು.‌ ಇಂತಹ ಗುರುವನ್ನು  ಹಿಂಬಾಲಿಸುವ ಯೋಗ್ಯ ಶಿಷ್ಯ ಮುಂದೆ ಅವನೇ ಗುರುವಿನ ಸ್ಥಾನ ಅಲಂಕರಿಸುವನು. ಇದುವೇ ಗುರು ಶಿಷ್ಯ ಪರಂಪರೆಯಲ್ಲಿ ಅಡಗಿದ ತತ್ವವಾಗಿದೆ. ಈ ಗುರು-ಶಿಷ್ಯ ಪರಂಪರೆಯ ತತ್ವವೇ ಭಾರತೀಯ ಕೃಷಿ ಸಂಸ್ಕೃತಿ ಉಳಿದು ಬೆಳೆಯಲು ಕಾರಣವಾಗಿದೆ.


ಜೋಡೆತ್ತುಗಳು ಬಯಲು ಸೀಮೆಯ ನಾಗರೀಕತೆಯ ನಿರ್ಮಾತೃಗಳು. ಬಯಲು ಸೀಮೆಯ ಗ್ರಾಮಗಳಲ್ಲಿ ಜೋಡೆತ್ತಿನ ಕೃಷಿ ಉಳಿದರೆ ಮಾತ್ರ ಗ್ರಾಮಕ್ಕೆ ಒಳ್ಳೆಯ ಭವಿಷ್ಯವಿದೆ ಎಂಬ ಸ್ಪಷ್ಟ ಸಂದೇಶವನ್ನು ಪ್ರತಿ ವರ್ಷ ಸಾರಿ ಹೇಳುವ ಉದ್ದೇಶದಿಂದ ಗ್ರಾಮಗಳಲ್ಲಿ ಕಂಬಿ ಮಲ್ಲಯ್ಯನ ಪೂಜೆ ಮಾಡುವ ಸಂಪ್ರದಾಯವನ್ನು ನಮ್ಮ ಹಿಂದಿನ ಆಧ್ಯಾತ್ಮಿಕ ಗುರುಗಳು ಪರಿಚಯಿಸಿದ್ದರು. ಗ್ರಾಮದಲ್ಲಿರುವ ಕಂಬಿ ಮಲ್ಲಯ್ಯ ಜೋಡೆತ್ತಿನ ಕೃಷಿಕರ ಭಾವೈಕ್ಯದೆ ಸಂಕೇತವಾಗಿದ್ದಾನೆ. ಶ್ರೀಶೈಲ ಮಲ್ಲಯ್ಯನು ಪ್ರತಿ ವರ್ಷ ಕಂಬಿಯ ಮೂಲಕ ನಮ್ಮ ಗ್ರಾಮಕ್ಕೆ ಆಗಮಿಸಿ ನಮಗೆಲ್ಲ ಮಾರ್ಗದರ್ಶನ ನೀಡಲಿ ಎಂಬುದು ಕಂಬಿ ಮಲ್ಲಯ್ಯನ ಪೂಜಾ ಆಚರಣೆಯಲ್ಲಿ ಅಡಗಿದ ತತ್ವವಾಗಿದೆ. ಈ ಸಂಪ್ರದಾಯದ ಮೂಲ ಉದ್ದೇಶವನ್ನು ಹಲವರು ಮರೆತಿದ್ದರೂ ಸಹ ಅತ್ಯಂತ ಶ್ರದ್ಧಾ ಭಕ್ತಿಯಿಂದ ಆಚರಣೆಯನ್ನು ಉಳಿಸಿಕೊಂಡು ಬಂದ ಮನೆತನಗಳಿಗೆ ಸಮಾಜ ಕೃತಜ್ಞರಾಗಿ ಇರಬೇಕಾದ ಅವಶ್ಯಕತೆ ಬಂದೊದಗಿದೆ. ಏಕೆಂದರೆ, ಇಂದು ಪ್ರತಿ ಗ್ರಾಮದಲ್ಲಿ ಉಳಿದಿರುವ ಜೋಡೆತ್ತುಗಳನ್ನು ಉಳಿಸಿ ಬೆಳೆಸುವ ಸಾಧ್ಯತೆ ಅದೇ ಕಂಬಿ ಮಲ್ಲಯ್ಯನ ಪೂಜಕರ ಮೂಲಕ ಮಾತ್ರ ಸಾಧ್ಯವಿದೆ. ಬಯಲು ಸೀಮೆಯ ಗ್ರಾಮಗಳಲ್ಲಿ ಜೋಡೆತ್ತಿನ ಕೃಷಿ ನಾಶವಾದರೆ, ಆ ಗ್ರಾಮ‌ಗಳು ಮುಂದಿನ ಕೆಲವು ದಶಕಗಳಲ್ಲಿ ಸಂಪುರ್ಣವಾಗಿ ನಾಶವಾಗುವ ಸಾಧ್ಯತೆಯಿದೆ. ಹೀಗಾಗಿ, ಇಂದು ಹೆಚ್ಚು ಜೋಡೆತ್ತುಗಳನ್ನು ಹೊಂದಿದ ಗ್ರಾಮವನ್ನು ಶ್ರೀಮಂತ ಗ್ರಾಮ‌ವನ್ನಾಗಿ ಗುರುತಿಸುವ ಅವಶ್ಯಕತೆಯಿದೆ. 


ಮುಂದಿನ ದಿನಗಳಲ್ಲಿ ಗ್ರಾಮಗಳು ಶ್ರೀಮಂತವಾಗಬೇಕಾದರೆ ಜೋಡೆತ್ತಿನ ಕೃಷಿ ಉಳಿಸಲೇಬೇಕಾಗಿದೆ. ಗ್ರಾಮಗಳಲ್ಲಿ ಜೊಡೆತ್ತಿನ ಕೃಷಿ ಉಳಿಸುವ ಜವಾಬ್ದಾರಿಯನ್ನು ಹೊತ್ತ ಕಂಬಿ ಮಲ್ಲಯ್ಯನ ಪೂಜಕರನ್ನು ಗುರುತಿಸಿ ಪ್ರೋತ್ಸಾಹಿಸಿ ಅವರ ಮೂಲಕ ಗ್ರಾಮಗಳಲ್ಲಿ ಜೋಡೆತ್ತಿನ ಕೃಷಿ ಉಳಿಸುವ ಪ್ರಯತ್ನ ಮಾಡಬೇಕಾಗಿದೆ. 


ಕಂಬಿ ಮಲ್ಲಯನನ್ನು ಗ್ರಾಮದಲ್ಲಿ ಉಳಿಸಿಕೊಳ್ಳುವ ಜವಾಬ್ದಾರಿ ಹೊತ್ತು ಪ್ರತಿ ವರ್ಷ  ಪಾದಯಾತ್ರೆಯ ಮೂಲಕ ಕಂಬಿ ಮಲ್ಲಯ್ಯನನ್ನು ಶ್ರೀಶೈಲ ಮಲ್ಲಯ್ಯನ ವರೆಗೆ ಕೊಂಡೊಯ್ಯುವ ಮಹಾನ್ ಸಮಾಜ ಸೇವೆ ಕೆಲಸ ಮಾಡುವ ಪೂಜಕರನ್ನು ಸಮಾಜವು ವಿಶೇಷವಾಗಿ ಗುರುತಿಸಿ ಸತ್ಕರಿಸಬೇಕಾಗಿದೆ. 


ಕೆಲವು ಕಂಬಿ ಮಲ್ಲಯ್ಯನ ಪೂಜಕರು ಸತತ 20 ವರ್ಷಗಳಿಂದ ಪಾದಯತ್ರೆಯ ಮೂಲಕ ಕಂಬಿಯನ್ನು ಶ್ರೀಶೈಲ ಮಲ್ಲಯ್ಯನ ವರೆಗೆ ಕೋಡೊಯ್ದು, ಆ ಮೂಲಕ ಶ್ರೀಶೈಲ ಮಲ್ಲಯ್ಯನ ಒಂದು ಅಂಶವನ್ನು ತಮ್ಮ ಗ್ರಾಮಕ್ಕೆ ತರುವ ಪ್ರಯತ್ನದಲ್ಲಿ ತೊಡಗಿದ್ದಾರೆ. ಅವರು ಪಾದಯಾತ್ರೆಯಲ್ಲಿ ತೊಡಗಿದ ವರ್ಷಗಳಿಗೆ ಅನುಗುಣವಾಗಿ ವಿಶೇಷ ಬಹುಮಾನ‌ ನೀಡುವುದರೊಂದಿಗೆ ನಂದಿ ವೀರ ಎಂಬ ಬಿರುದು ನೀಡಿ‌ ಗೌರವಿಸುವ ವಿಚಾರವನ್ನು ಜೊಡೆತ್ತುಗಳ ಕೃಷಿಯ ಪುನಶ್ಚೇತನಕ್ಕಾಗಿ ಪ್ರಯತ್ನಿಸುತ್ತಿರುವ ರೈತ ಮಿತ್ರ ಸ್ವಯಂ‌ ಸೇವಕರು ಹೊಂದಿದ್ದಾರೆ.ಬಸವರಾಜ ಬಿರಾದಾರ

ಸಂಸ್ಥಾಪಕರು, 

ಅಭೀಃ ಫೌಂಡೇಶನ್

9449303880

missionsavesoil.com


ನಂದಿ ಕೃಷಿ ಪುನಶ್ಚೇತನ ಸಂಕಲ್ಪ ಯಾತ್ರೆ


 ಕಂಬಿ ಮಲ್ಲಯ್ಯನ ದರ್ಶನ ಹಾಗೂ ಸಂಕಲ್ಪ 


 "ಗ್ರಾಮಗಳಲ್ಲಿರುವ ಕಂಬಿ ಮಲ್ಲಯ್ಯನ ದರ್ಶನ ಮಾಡಿ ಗ್ರಾಮದ ಎತ್ತುಗಳ ಸಂತತಿ ಹೆಚ್ಚಾಗಲಿ ಎಂದು ಸಂಕಲ್ಪ ಮಾಡುವ "ರೈತ ಮಿತ್ರ ಸ್ವಯಂ‌ ಸೇವಕರ" ಯಾತ್ರೆ ಇದಾಗಿದೆ" 


ನಮ್ಮ ಹಿಂದಿನ ಆಧ್ಯಾತ್ಮಿಕ ಗುರುಗಳು ಎತ್ತುಗಳು ಬಯಲು ಸೀಮೆಯ ನಾಗರೀಕತೆಗಳ ನಿರ್ಮಾಣಕ್ಕೆ ಮೂಲ ಕಾರಣೀಕರ್ತವಾಗಿವೆ ಎಂಬುದನ್ನು ಅರಿತು ಎತ್ತುಗಳ ಆಧಾರಿತವಾಗಿ ಹಲವು ಆಚರಣೆಗಳನ್ನು ವರ್ಷಪೂರ್ತಿ ಜೋಡಣೆ ಮಾಡಿದ್ದರು. ಇತ್ತೀಚಿನ ಆಧುನಿಕತೆಯ ಭರದಲ್ಲಿ ಬಯಲು ಸೀಮೆಯ ಜೀವನಾಡಿಯಾದ ಎತ್ತುಗಳನ್ನು ನಮ್ಮ ಅರಿವಿನ ಕೊರತೆಯಿಂದ ಕಳೆದುಕೊಳ್ಳುತ್ತಿರುವುದು ಎಲ್ಲರಿಗೂ ತಿಳಿದ ವಿಷಯವಾಗಿದೆ. ಎತ್ತುಗಳನ್ನು ಸಾಕುವವರಿಲ್ಲದ ಕಾರಣ ಹೋರಿಕರುಗಳನ್ನು ಸಾಕಲು ಬಹು ಜನರು ಇಚ್ಚಿಸುತ್ತಿಲ್ಲ. ಈ ಕಾರಣದಿಂದ, ದಿನಾಲು ಲಕ್ಷಾಂತರ ಹೋರಿಕರುಗಳು ಕಾಸಾಯಿಖಾನೆಯ ಪಾಲಾಗುತ್ತಿವೆ. ಬರಗಾಲ ಹಾಗೂ ಕಡು ಬೇಸಿಗೆಯ ಸಮಯದಲ್ಲಿ ನೀರು ಹಾಗೂ ಮೇವಿನ ಕೊರತೆಯಿಂದ ರೈತರು ಅನಿವಾರ್ಯವಾಗಿ ಎತ್ತುಗಳನ್ನು ಮಾರಾಟ ಮಾಡಿದಾಗ, ಅದರಲ್ಲಿ ಅನೇಕ ಎತ್ತುಗಳು ಕಾಸಾಯಿಖಾನೆಯ ಪಾಲಾಗುವ ಸಾಧ್ಯತೆಯಿದೆ.


ಎತ್ತುಗಳ ಮಹತ್ವವನ್ನು ಬಹು ಜನರು ಸದಾ ಅರಿತು ನಡೆಯಲಿ ಎಂಬ ಕಾರಣಕ್ಕಾಗಿ ವರ್ಷಪೂರ್ತಿ ರೈತರಿಗೆ ಹೆಗಲು ನೀಡಿದ ಎತ್ತುಗಳಿಗೆ ಕೃತಜ್ಞತೆ ಅರ್ಪಿಸುವ ಉದ್ದೇಶದಿಂದ ಕಂಬಿ ಮಲ್ಲಯ್ಯನ ರೂಪದಲ್ಲಿರುವ ಕಟ್ಟಿಗೆಯ ನಂದಿಗೆ ಶ್ರದ್ಧಾ ಭಕ್ತಿಯಿಂದ ಪೂಜಿಸುವ ಸಂಪ್ರದಾಯವನ್ನು ನಮ್ಮ ಹಿಂದಿನ ಆಧ್ಯಾತ್ಮಿಕ ಗುರುಗಳು ಪರಿಚಯಿಸಿದ್ದಾರೆ. ಶ್ರೀಶೈಲ ಮಲ್ಲಯ್ಯನ ಒಂದು ಅಂಶವಾಗಿ ನಮ್ಮ ಗ್ರಾಮಗಳಲ್ಲಿರುವ ಕಂಬಿ ಮಲ್ಲಯ್ಯನಿಗೆ

ಹೆಗಲು ನೀಡಿ ಶ್ರೀಶೈಲ ಮಲ್ಲಯ್ಯನವರೆಗೆ ಶ್ರದ್ಧಾ ಭಕ್ತಿಯಿಂದ ಕೊಂಡೊಯ್ದು ಕೃತಜ್ಞತೆ ಅರ್ಪಿಸುವುದರಿಂದ ಮಲ್ಲಯ್ಯ ಮುಂದಿನ ದಿನಗಳಿಗೆ ಮಾರ್ಗದರ್ಶನ ನೀಡುತ್ತಾನೆ. ಆದರೆ, ಇಂದು ಗ್ರಾಮದ ಜೀವಂತಿಕೆಗೆ ಕಾರಣೀಭೂತವಾದ ಎತ್ತುಗಳ ಸಂತತಿಯನ್ನು ಕಳೆದುಕೊಂಡು ಶ್ರೀಶೈಲ ಮಲ್ಲಯ್ಯನ ಹತ್ತಿರ ಹೋದರೆ ಮಲ್ಲಯ್ಯನಾದರೂ ನಮ್ಮನ್ನು ಹೇಗೆ ಕಾಪಾಡಬಹುದು ಎಂಬುದು ದೊಡ್ಡ ಪ್ರಶ್ನೆಯಾಗಿದೆ.


ಇಂದು ಜೋಡೆತ್ತುಗಳ ಕೃಷಿ ನಶಿಸಿ ಹೋಗುತ್ತಿರುವುದರಿಂದ ನಮ್ಮ ಗ್ರಾಮಗಳಲ್ಲಿರುವ ಹಳ್ಳ, ಬಾವಿ ಹಾಗೂ ಕೊಳವೆ ಬಾವಿಗಳು ಬತ್ತಿ ಹೋಗಿ ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಇಂದು ಗ್ರಾಮಗಳಲ್ಲಿ ಉಳಿದಿರುವ ಜೋಡೆತ್ತುಗಳು ನಶಿಸಿ ಹೋದರೆ, ಮುಂದಿನ ಕೆಲವೇ ವರ್ಷಗಳಲ್ಲಿ ತುತ್ತು ಅನ್ನಕ್ಕೂ ಕೂಡ ಪರದಾಡುವ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆಯಿದೆ. ಈ ಕಾರಣಕ್ಕಾಗಿ, ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಯ ವರ ಆಶಯದಂತೆ ಎತ್ತುಗಳನ್ನು ಉಳಿಸುವ ಸಂದೇಶ ರವಾನಿಸುವ ಉದ್ದೇಶದಿಂದ  ವಿಜಯಪುರ ಜಿಲ್ಲೆಯ ಪ್ರಮುಖ ಆಧ್ಯಾತ್ಮಿಕ ಸ್ಥಳಗಳಿಗೆ ಜೋಡೆತ್ತಿನ ಬಂಡಿಗಳ ನಂದಿ ಯಾತ್ರೆ ಸಂಚರಿಸಿ ರೈತ‌ ಮಿತ್ರ ಸ್ವಯಂ ಸೇವಕರ ಸಂಘ ಗಳನ್ನು ರಚಿಸಲಾಗಿದೆ. ಮುಂದುವರೆದು, ಎತ್ತು ಸಾಕಾಣಿಕೆದಾರರಿಗೆ ಸೂಕ್ತ ಪ್ರೋತ್ಸಾಹ ದೊರೆಯುವಂತೆ ಮಾಡಲು ಎತ್ತು ಸಾಕಾಣಿಕೆದಾರರನ್ನು ಸಂಘಟಿಸುತ್ತಿರುವ ರೈತ ಮಿತ್ರ ಸ್ವಯಂ ಸೇವಕರು ಹಲವು ಗ್ರಾಮಗಳಿಗೆ ಭೇಟಿ‌ ನೀಡುತ್ತಿದ್ದಾರೆ. ಆಯಾ ಗ್ರಾಮದ ಕಂಬಿ ಮಲ್ಲಯ್ಯನ ದರ್ಶನ ಮಾಡಿ ಗ್ರಾಮದಲ್ಲಿ ಎತ್ತುಗಳ ಸಂತತಿ ಹೆಚ್ಷಾಗಲಿ ಎಂಬ ಸಂಕಲ್ಪ ಮಾಡಲು ನಂದಿ ಕೃಷಿ ಪುನಶ್ಚೇತನ ಸಂಕಲ್ಪ ಯಾತ್ರೆ ಪ್ರಾರಂಭಿಸಲಾಗಿದೆ.


ನಂದಿ ಯಾತ್ರೆ ಪ್ರಾರಂಭಿಸಿದ ಸ್ಥಳವಾದ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರು ಜನ್ಮ ತಾಳಿದ ಗ್ರಾಮವಾದ ಬಿಜ್ಜರಗಿಯಿಂದ  "ನಂದಿ ಕೃಷಿ ಪುನಶ್ಚೇತನ ಸಂಕಲ್ಪ ಯಾತ್ರೆ" ಪ್ರಾರಂಭವಾಗಿ ವಿಜಯಪುರ ಜಿಲ್ಲೆಯ ಪ್ರಮುಖ 40 ಆಧ್ಯಾತ್ಮಿಕ ಸ್ಥಳಗಳಿಗೆ ಸಂಚರಿಸಿದ ನಂತರ ಇತರ ಗ್ರಾಮಗಳಿಗೆ ಯಾತ್ರೆ ಮುಂದುವರೆದಿದೆ.

......................................

 "ಜೋಡೆತ್ತಿನ ಕೃಷಿ ಉಳಿದರೆ ಮಾತ್ರ ನಮ್ಮ ಮಕ್ಕಳಿಗೆ ಉತ್ತಮ‌ ಆಹಾರ ದೊರೆಯಲು ಸಾಧ್ಯ" ಎಂಬ ಸಂದೇಶವನ್ನು  ಪ್ರತಿಯೊಬ್ಬರ ಮನೆಗೆ ಕೊಂಡೊಯ್ದು ನಮ್ಮ ಗ್ರಾಮದ ಎತ್ತುಗಳ ಸಂತತಿ ಹೆಚ್ಚಾಗಲಿ ಎಂಬ ಸಂಕಲ್ಪ ತೊಡೋಣ ಬನ್ನಿ!

......................................


 ಈ ಕರಪತ್ರವನ್ನು ಪ್ರಿಂಟ್ ಮಾಡಿಸಿ ಹಂಚುವ ಮೂಲಕ ಶ್ರೀಶೈಲ ಮಲ್ಲಯ್ಯನ ಕೃಪೆಗೆ ಪಾತ್ರರಾಗಿ 


🙏🏻🙏🏻🙏🏻🙏🏻🙏🏻🙏🏻

 ರೈತ ಮಿತ್ರ ಸ್ವಯಂ ಸೇವಕರು 

 ಪ್ರೇರಣೆ: ಅಭೀಃ ಫೌಂಡೇಶನ್, ವಿಜಯಪುರ


ಈ ಸಂಖ್ಯೆಗೆ ಮಿಸ್ ಕಾಲ್ ಮಾಡಿ ಹೆಚ್ಚಿನ ಮಾಹಿತಿ ಪಡೆಯಿರಿ: 7676057753


missionsavesoil.com